ಅಂತ್ಯಕ್ರಿಯೆಯ ಬಳಿಕ ವ್ಯಕ್ತಿ ಮನೆಯಲ್ಲಿ ಪ್ರತ್ಯಕ್ಷ: ಶಾಕ್ ಗೆ ಒಳಗಾದ ಕುಟುಂಬಸ್ಥರು!
Thursday, April 7, 2022
ಈರೋಡ್: ಮೃತಪಟ್ಟರೆಂದು ಅಂತ್ಯಕ್ರಿಯೆ ನಡೆಸಲು ತಯಾರಿ ಮಾಡುತ್ತಿದ್ದ ಸಂದರ್ಭ ಮೃತಪಟ್ಟವರು ಎದ್ದು ಕುಳಿತಿರುವ ಹಲವಾರು ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ. 55 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿರುವನೆಂದು ಭಾವಿಸಿ ಆತನನ್ನು ರವಿವಾರ ಸಂಜೆ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದರು. ಆದರೆ, ಮೃತ ವ್ಯಕ್ತಿ ಸೋಮವಾರ ಸಂಜೆ ಮನೆಗೆ ಮರಳಿದ್ದಾನೆ. ಆತನನ್ನು ನೋಡಿದ ಕುಟುಂಬಸ್ಥರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ.
ಈ ಪ್ರಕರಣ ತಮಿಳುನಾಡಿನ ಈರೋಡ್ ಜಿಲ್ಲೆಯ ಬನಗಲದಪುರದಲ್ಲಿ ನಡೆದಿದೆ. ದಿನಗೂಲಿ ನೌಕರ ಮೂರ್ತಿ ಹಲವು ದಿನಗಳ ಹಿಂದೆ ಕಬ್ಬು ಕಟಾವು ಮಾಡಲೆಂದು ತಿರ್ಪೂರ್ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರಿಂದ ಮೂರ್ತಿ ಪುತ್ರ ಕಾರ್ತಿಗೆ ಕರೆ ಬಂದಿದೆ. ಬಸ್ ನಿಲ್ದಾಣದ ಬಳಿ ನಿಮ್ಮ ತಂದೆಯ ಮೃತದೇಹ ಪತ್ತೆಯಾಗಿದೆ ಎಂದು ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪುತ್ರ ಅದು ತನ್ನ ತಂದೆಯ ಮೃತದೇಹ ಎಂದು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಠಾಣಾ ಪೊಲೀಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಆ ಬಳಿಕ ಕುಟುಂಬಸ್ಥರು ರವಿವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಆದರೆ ಸೋಮವಾರ ಸಂಜೆ ಮೂರ್ತಿ ಮನೆಗೆ ಬಂದಿದ್ದಾರೆ. ಪರಿಣಾಮ ಇಡೀ ಕುಟುಂಬವೇ ಒಂದು ಕ್ಷಣ ಆಘಾತಕ್ಕೆ ಒಳಗಾಗಿದೆ. ತಮ್ಮ ಕಣ್ಣುಗಳನ್ನು ತಾವೇ ನಂಬಲು ಅವರಿಗೆ ಅಸಾಧ್ಯವಾಗಿದೆ. ನಮ್ಮ ತಂದೆ ಮನಗೆ ಬಂದರು. ತಕ್ಷಣ ಕಾರ್ತಿ ಪೊಲೀಸರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಇದೀಗ ಮೊದಲು ಪತ್ತಯಾಗಿದ್ದ ವ್ಯಕ್ತಿಯ ಮೃತದೇಹ ಯಾರದ್ದು ಎಂದು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವಿಚಾರ ಈರೋಡ್ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.