ಮಂಗಳೂರು: ನಿರ್ಮಾಣ ಹಂತದ ಮನೆಯ ಸ್ಲ್ಯಾಬ್ ಕುಸಿದು ಓರ್ವ ಕಾರ್ಮಿಕ ಮೃತ್ಯು, ಮತ್ತಿಬ್ಬರಿಗೆ ಗಂಭೀರ ಗಾಯ
Friday, April 29, 2022
ಮಂಗಳೂರು: ನಗರದ ಉರ್ವ ಮಾರಿಗುಡಿ ದೇವಳದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರ ಸ್ಲ್ಯಾಬ್ ಕುಸಿದ ಪರಿಣಾಮ ಬಲಿಯಾಗಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾ ಮೂಲದ ಸಲೀಂ ಶೇಖ್ (45) ಮೃತಪಟ್ಟವರು. ಪಂಜಿಮೊಗರು ನಿವಾಸಿ ಕಿರಣ್ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಹನುಮಂತ ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಲ್ಯಾಬ್ ಕುಸಿದ ಹಿನ್ನೆಲೆ ಪ್ರಜ್ಞೆ ತಪ್ಪಿ ಬಿದ್ದ ಸಲೀಂ ಶೇಖ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಪಾಸಣೆ ನಡೆಸಿರುವ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗುಜರಾತ್ ಮೂಲದ ಉದ್ಯಮಿಯೋರ್ವರಿಗೆ ಸೇರಿದ ಈ ಸ್ಥಳದಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆದರೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್‌ಗೆ ಸಪೋರ್ಟ್ ನೀಡಿದ್ದ ಕಂಬಗಳನ್ನು ತೆರವುಗೊಳಿಸಲಾಗುತ್ತಿತ್ತು.
ಈ ಸಂದರ್ಭ ಏಕಾಏಕಿ ಸ್ಲ್ಯಾಬ್ ಕಾರ್ಮಿಕರ ಮೈ ಮೇಲೆಯೇ ಕುಸಿದು ಬಿದ್ದಿದೆ. ಉರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದ್ದಾರೆ. ಕಟ್ಟಡ ಕಾಮಗಾರಿಯಲ್ಲಾದ ಲೋಪದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮಾಲಕ, ಗುತ್ತಿಗೆದಾರ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.