ತನ್ನದೆಲ್ಲವನ್ನೂ ಒಪ್ಪಿಸಿದ ಪ್ರಿಯಕರನಿಂದ ವಂಚನೆ ಆರೋಪ: ಆತನ ಹುಟ್ಟುಹಬ್ಬದ ದಿನವೇ ಆತನಿಗೆ ಕಾದಿತ್ತು ಶಾಕ್!
Sunday, April 3, 2022
ಮೈಸೂರು: ಪ್ರೀತಿಸಿದ ಯುವಕ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.
ಪ್ರೀತಿಯ ಬಲೆಗೆ ಬಿದ್ದು ತನ್ನದ್ದೆಲ್ಲವನ್ನೂ ಆತನಿಗೆ ದೇಹವನ್ನು ಒಪ್ಪಿಸಿರುವ ಯುವತಿಯೀಗ ಆತನಿಂದ ವಂಚಿತಳಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ಎಂಬಾತನ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ಆರೋಪಿ ಪ್ರಭುಸ್ವಾಮಿ ಹಾಗೂ ಯುವತಿ ಇಬ್ಬರು ಒಂದೇ ಗ್ರಾಮದವರು. ಪ್ರಿಯಕರನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ಅಸ್ವಸ್ಥಗೊಂಡಿರುವ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭುಸ್ವಾಮಿ ತನ್ನ ಹುಟ್ಟುಹಬ್ಬದ ಆಚರಣೆಗೆ ಪ್ರೇಯಸಿಯನ್ನೂ ಆಹ್ವಾನಿಸಿದ್ದ. ಈ ವೇಳೆ ಯುವತಿ ಮದುವೆ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರಭುಸ್ವಾಮಿ ಸ್ನೇಹಿತರ ಎದುರೇ ಯುವತಿಯ ಕಪಾಳಕ್ಕೆ ಹೊಡೆದು ಆಕೆಯನ್ನು ಅವಮಾನಿಸಿದ್ದ. ಇದಾಗಿ ಮೂರು ದಿನಗಳ ಬಳಿಕ ಪ್ರಭುಸ್ವಾಮಿ ಮನೆಗೆ ಆಗಮಿಸಿರುವ ಯುವತಿ ಪ್ರಿಯಕರನ ತಾಯಿಗೆ ಎಲ್ಲ ವಿಚಾರವನ್ನು ಹೇಳಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಪ್ರಭುಸ್ವಾಮಿ ತನ್ನನ್ನು ಪ್ರೀತಿಸುತ್ತಿದ್ದಾನೆ. ಅಲ್ಲದೆ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮೂರು ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಕಪಾಳಕ್ಕೆ ಹೊಡೆದು ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ಪ್ರಿಯತಮನ ಕುಟುಂಬಸ್ಥರ ಮುಂಭಾಗವೇ ವಿಷ ಸೇವನೆ ಮಾಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.