ಭಾರತೀಯ ಸೇನೆಗೆ ನೇಮಕಾತಿಯಾಗದೆ ಮನನೊಂದು ಯುವಕ ಆತ್ಮಹತ್ಯೆ
Sunday, May 1, 2022
ಭಿವಾನಿ(ಹರಿಯಾಣ): ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆ ಮಾಡಬೇಕೆಂಬ ಕನಸು ಹೊತ್ತಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.
ಪವನ್ ಕುಮಾರ್(23) ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದಾನೆ. ಕಳೆದ 9 ವರ್ಷಗಳಿಂದ ಪವನ್ ಸೇನೆ ಸೇರಲು ತಯಾರಿ ನಡೆಸುತ್ತಿದ್ದನು. ಆದರೆ, ನೇಮಕಾತಿಯಾಗದ ಹಿನ್ನೆಲೆಯಲ್ಲಿ ಎಪ್ರಿಲ್ 27ರಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರಿಯಾಣ ಹಾಗೂ ಪಂಜಾಬ್ನ ಯುವಕರಲ್ಲಿ ಹೆಚ್ಚಿನವರು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಅದಕ್ಕಾಗಿ ಸಣ್ಣ ವಯಸ್ಸಿನಿಂದಲೇ ಶ್ರಮಪಟ್ಟು ತಯಾರಿ ನಡೆಸುತ್ತಾರೆ. ಅದೇ ಬಯಕೆಯಿಂದ ಭಿವಾನಿ ನಿವಾಸಿ ಪವನ್ ದಿನಕ್ಕೆ ಮೂರು ಸಲ ವರ್ಕೌಟ್ ಮಾಡ್ತಿದ್ದ. ಪವನ್ ಭಾರತೀಯ ಸೇನೆಯೊಂದಿಗೆ ಹರಿಯಾಣ ಸರ್ಕಾರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದ. ಆದ್ದರಿಂದ ಪವನ್ ಸೇನೆಯಲ್ಲಿ ನೇಮಕಾತಿ ಆಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗಿಂತ ಮೊದಲು ಪವನ್ ತಾನು ಓಡ್ತಿದ್ದ ರನ್ನಿಂಗ್ ಟ್ರ್ಯಾಕ್ ಮೇಲೆ ಡೆತ್ ನೋಟ್ ಬರೆದಿಟ್ಟಿದ್ದಾನೆ. ಈ ಸಲವೂ ಸೇನೆ ಸೇರಲು ನನ್ನಿಂದ ಆಗಲಿಲ್ಲ. ಮುಂದಿನ ಜನ್ಮದಲ್ಲಿ ಸೈನಿಕನಾಗಿ ನಿಮ್ಮ ಕನಸು ಈಡೇರಿಸುತ್ತೇನೆ ಅಪ್ಪಾಜಿ. ಇದೀಗ ಸೇನೆ ಸೇರಲು ನನ್ನ ವಯಸ್ಸು ಕೂಡ ಮೀರಿದೆ ಎಂದು ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದಾನೆ.
ಕಳೆದ ಕೆಲ ತಿಂಗಳ ಹಿಂದೆ ಭಾರತೀಯ ಸೇನೆಯು ನಡೆಸಿರುವ ಸೇನಾ ರ್ಯಾಲಿಯಲ್ಲಿ ಪವನ್ ಕುಮಾರ್ ಲಿಖಿತ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್ ಆಗಿದ್ದನಂತೆ. ಆದರೆ, ಕೊನೆಯ ಕಟ್ಆಫ್ನಲ್ಲಿ ಆತನಿಗೆ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ, ಹತಾಶೆಗೊಂಡ ಪವನ್ ಈ ನಿರ್ಧಾರ ಕೈಗೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.