ಲ್ಯಾಂಡ್ ಆಗಲು ಇನ್ನೇನು ಕೆಲವೇ ಕ್ಷಣಯಿರುವಾಗ ವಿಮಾನದ ಟೈರ್ ಬ್ಲಾಸ್ಟ್: ಬೆಂಗಳೂರಿನಲ್ಲಿ ತಪ್ಪಿದ ಭಾರೀ ದುರಂತ
Thursday, April 28, 2022
ಬೆಂಗಳೂರು: ಲ್ಯಾಂಡಿಂಗ್ ಆಗಲು ಇನ್ನೇನು ಕೆಲವೇ ಕ್ಷಣವೇ ಇರುವ ವೇಳೆ ವಿಮಾನದ ಟೈರ್ ಸ್ಫೋಟಗೊಂಡಿತ್ತಾದರೂ ಪೈಲೆಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಮುಂದಾಗಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.
150 ಪ್ರಯಾಣಿಕರನ್ನು ಹೊತ್ತುಕೊಂಡ ಥಾಯಿ ವಿಮಾನವು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಲವೇ ಕ್ಷಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಅದಾಗಲೇ ಭಾರೀ ಅನಾಹುತವೊಂದು ನಡೆದಿದ್ದು, ವಿಮಾನದ ಟೈರ್ ಸ್ಫೋಟಗೊಂಡು ವಿಮಾನದಲ್ಲಿದ್ದವರು ಆತಂಕದಲ್ಲಿದ್ದರು. ಆದರೆ ಪೈಲೆಟ್ ಹೆದರದೇ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಎಪ್ರಿಲ್ 26 ರಂದು ಈ ಘಟನೆ ನಡೆದಿದೆ. ತಾಂತ್ರಿಕ ತಂಡ ವಿಮಾನದ ಚಕ್ರವನ್ನು ಸರಿಪಡಿಸಿದ್ದು, ಎಪ್ರಿಲ್ 28ಕ್ಕೆ ಬೆಂಗಳೂರಿನಿಂದ ಮರಳಿ ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಯಿಂಗ್ 787-8 ವಿಮಾನವು ಎಪ್ರಿಲ್ 26ರಂದು ಬ್ಯಾಂಕಾಕ್ನಿಂದ ಹೊರಟು ಬೆಂಗಳೂರಿಗೆ ರಾತ್ರಿ 11.32ಕ್ಕೆ ಲ್ಯಾಂಡ್ ಆಗಿದೆ. ಈ ಸಂದರ್ಭ ವಿಮಾನದ ಟೈರ್ ಸ್ಫೋಟಗೊಂಡ ಬಗ್ಗೆ ವಿಮಾನ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳಿಗೆ ಪೈಲೆಟ್ ಮಾಹಿತಿ ರವಾನಿಸಿದ್ದಾರೆ. ಆದರೆ ಪವಾಡಸದೃಶ ವಿಮಾನ ಯಾವುದೇ ದುರಂತಕ್ಕೀಡಾಗದೆ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.