ನುಗ್ಗಿಕೇರಿ ಗಲಭೆ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿಗಳಿಗೆ ಕಲ್ಲಂಗಡಿ ಹಣ್ಣು ಒಡೆದು ಸ್ವಾಗತ!
Sunday, April 17, 2022
ಧಾರವಾಡ: ನಗರದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಈ ನಾಲ್ವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಧಾರವಾಡ ಹೊರವಲಯದ ನುಗ್ಗಿಕೇರಿ ದೇವಸ್ಥಾನದಲ್ಲಿ ಎ.9ರಂದು ಈ ಗಲಭೆ ನಡೆದಿತ್ತು. ಪ್ರಕರಣವು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರಾದ ಮೈಲಾರಪ್ಪ, ಮಹಾಲಿಂಗ, ಚಿದಾನಂದ ಮತ್ತು ಕುಮಾರ ಎಂಬವರನ್ನು ಬಂಧಿಸಲಾಗಿತ್ತು. ನಿನ್ನೆ ಆರೋಪಿಗಳಿಗೆ ಧಾರವಾಡ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ವಿರುದ್ಧ ಅಂಗಡಿ ಮಾಲಕ ನಬೀಸಾಬ್ ನೀಡಿರುವ ದೂರಿನನ್ವಯ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಶ್ರೀರಾಮಸೇನೆಯ ಕಾರ್ಯಕರ್ತರಿಗೆ ಸಾಧನಕೇರಿಯಲ್ಲಿನ ಕಚೇರಿಯಲ್ಲಿ ವಿಶೇಷ ರೀತಿಯಲ್ಲಿ ಸ್ವಾಗತ ಕೋರಲಾಯಿತು. ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣನ್ನು ಒಡೆದು ಆರೋಪಿಗಳಾಗಿ ಜೈಲಿಗೆ ಹೋಗಿದ್ದ ಕಾರ್ಯಕರ್ತರನ್ನು ಸಂಘಟನೆಯ ಸದಸ್ಯರು ಕುಂಬಳಕಾಯಿ ಬದಲು ಕಲ್ಲಂಗಡಿ ಹಣ್ಣನ್ನೇ ಒಡೆದು ಸ್ವಾಗತ ಕೋರಿದರು.