ಟ್ರೈನ್ ನಿಲ್ಲಿಸಿ ಮದ್ಯ ಸೇವನೆ ಮಾಡಲು ತೆರಳಿದ ಲೋಕೊ ಪೈಲಟ್.. ನಿಲ್ದಾಣದಲ್ಲಿಯೇ 1 ಗಂಟೆ ರೈಲು ಬಾಕಿ
Wednesday, May 4, 2022
ಹಸನ್ಪುರ(ಬಿಹಾರ): ಬಿಹಾರದಲ್ಲಿ ಮದ್ಯ ಸೇವನೆಗೆ ನಿಷೇಧವಿದೆ. ಆದರೂ, ಮದ್ಯಪಾನ ಮಾಡಿ ಸಿಕ್ಕಿಬಿದ್ದಿರುವ ಸಾಕಷ್ಟು ಪ್ರಕರಣಗಳು ಕೇಳಿ ಬರುತ್ತಲೇ ಇದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಲೋಕೊ ಪೈಲಟ್ ಓರ್ವನು ರೈಲು ನಿಲ್ಲಿಸಿ ಮದ್ಯ ಸೇವನೆ ಮಾಡಲು ಹೋಗಿದ್ದು, ಪರಿಣಾಮ ರೈಲು ಒಂದು ಗಂಟೆ ತಡವಾಗಿ ಹೊರಟ ಘಟನೆ ನಡೆದಿದೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಹಸನ್ಪುರದಲ್ಲಿ ಈ ಪ್ರಕರಣ ನಡೆದಿದೆ. ಮದ್ಯ ಸೇವಿಸಲೆಂದು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ ತೆರಳಿರುವ ಲೋಕೊ ಪೈಲಟ್, ಸುಮಾರು ಒಂದು ಗಂಟೆಗಳ ಕಾಲ ಆಗಮಿಸಿರಲಿಲ್ಲ. ಪರಿಣಾಮ ಪರ್ಯಾಯ ವ್ಯವಸ್ಥೆ ಮಾಡಿ, ರೈಲನ್ನು ಮುಂದಿನ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ಬಿಹಾರದ ಸಮಸ್ತಿಪುರದಿಂದ ಸಹರ್ಸಾಗೆ 05278 ಪ್ಯಾಸೆಂಜರ್ ರೈಲು ತೆರಳುತ್ತಿತ್ತು. ಆದರೆ ಈ ರೈಲು ಹಸನ್ಪುರ ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ರೈಲು ನಿಂತಿದೆ. ಈ ವೇಳೆ, ಪ್ರಯಾಣಿಕರು ರೈಲು ಸಂಚಾರ ಮಾಡುವಂತೆ ಬಹಳ ಒತ್ತಾಯಿಸಿದ್ದಾರೆ. ಆದರೆ, ಲೋಕೊ ಪೈಲಟ್ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಬೇರೆ ಸಿಬ್ಬಂದಿಯ ಸಹಾಯದಿಂದ ರೈಲು ಮುಂದಿನ ನಿಲ್ದಾಣಕ್ಕೆ ಕಳುಹಿಸಿದ್ದಾರೆ.
ಈ ರೈಲಿನ ಲೋಕೋ ಪೈಲಟ್ ಕರ್ಮವೀರ್ ಪ್ರಸಾದ್, ಹಸನ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲಿಸಿ, ಮಾರುಕಟ್ಟೆಗೆ ಹೋಗಿದ್ದಾನೆ. ಅಲ್ಲಿ ಮದ್ಯ ಸೇವನೆ ಮಾಡಿ ಗಲಾಟೆ ಮಾಡಿದ್ದಾನೆ. ಈ ಬಗ್ಗೆ ರೈಲ್ವೆ ಇಲಾಖೆಗೆ ಮಾಹಿತಿ ಸಹ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆತನನ್ನು ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಕರ್ಮವೀರ್ ಬಳಿ ಇದ್ದ ಮದ್ಯದ ಬಾಟಲಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.