ಅಜಾನ್ ಮೈಕ್ ಗೆ ಓಂಕಾರದ: ರಾಜ್ಯಾದ್ಯಂತ 1 ಸಾವಿರ ದೇವಾಲಯಗಳಲ್ಲಿ ಓಂಕಾರ, ಸುಪ್ರಭಾತ
Monday, May 2, 2022
ಮಂಗಳೂರು: ಮಸೀದಿಗಳಲ್ಲಿನ ಮೈಕ್ ಗಳನ್ನು ಕೆಳಗಿಳಿಸಬೇಕೆಂದು ಶ್ರೀರಾಮ ಸೇನೆ ರಾಜ್ಯ ಸರಕಾರಕ್ಕೆ ಮನವಿ ಮಾಡಿ ಗಡುವು ನೀಡಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಮುಸ್ಲಿಂ ಸಮಾಜಕ್ಕೆ ಸವಾಲೆಂಬಂತೆ ಮೇ 9ರಂದು ರಾಜ್ಯಾದ್ಯಂತ 1ಸಾವಿರ ದೇವಸ್ಥಾನ, ಮಠಗಳಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ ಓಂಕಾರ, ಸುಪ್ರಭಾತವನ್ನು ಕೇಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲೆಸೆದರು.
ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸರಕಾರವೇನಾದರೂ ಇದನ್ನು ತಡೆಯಲು ಬಂದಲ್ಲಿ ಸಂಘರ್ಷ ಖಂಡಿತ. ಇದು ತಾಲಿಬಾನ್, ಅಫ್ಘಾನಿಸ್ತಾನವಲ್ಲ. ಇದು ಭಾರತದ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ ಎಂಬುದನ್ನು ಮುಸ್ಲಿಂ ಸಮಾಜವೂ ನೆನಪಿನಲ್ಲಿಡಲಿ ಎಂದು ಕಟುವಾಗಿ ನುಡಿದರು.
ಅಜಾನ್ ಮೈಕ್ ಗಳ ಅಬ್ಬರವನ್ನು ಅನ್ನು ಸ್ಥಗಿತಗೊಳಿಸಲು ಕಳೆದ 15 ವರ್ಷಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾವು ಅಜಾನ್ ವಿರುದ್ಧ ಸಮರ ಸಾರುತ್ತಿಲ್ಲ. ಬದಲಾಗಿ ಮೈಕ್ ನ ಶಬ್ದ ಹಾಗೂ ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘನೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆಜ್ಞೆ ಮಸೀದಿಯ ಮೇಲಿನ ಮೈಕ್ ವಿಚಾರದಲ್ಲಿ ಪಾಲನೆ ಆಗುತ್ತಿಲ್ಲ. ಇಲ್ಲಿ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಮೈಕ್ ಶಬ್ದ ಎಷ್ಟು ಇರಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಿಶ್ಶಬ್ಧ ವಲಯದ ಪ್ರದೇಶದಲ್ಲೂ ಅಜಾನ್ ಮೈಕ್ ಹಾಕಬಾರದೆಂದು ಹೇಳಲಾಗಿದೆ. ಇಲ್ಲೆಲ್ಲಾ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯೂ ಆಗಿದೆ. ಮುಸ್ಲಿಂ ಸಮಾಜ ಒಂದು ಕಡೆಯಲ್ಲಿ ಹಠದಿಂದ ಸೊಕ್ಕಿನಿಂದ ವರ್ತಿಸುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಇನ್ನೊಂದೆಡೆ ಆಡಳಿತ ಮಾಡುತ್ತಿರುವ ಸರಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುತ್ತಿಲ್ಲ. ಆದ್ದರಿಂದ ಆಜಾನ್ ಮೈಕ್ ಮಾತ್ರವಲ್ಲ ಸರಕಾರದ ವಿರುದ್ಧವೂ ನಮ್ಮ ಹೋರಾಟವು ನಡೆಯುತ್ತದೆ. ಉತ್ತರ ಪ್ರದೇಶದ ಯೋಗಿ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರವೂ ಮಸೀದಿಯ ಮೈಕ್ ಗಳನ್ನು ಕೆಳಗಿಳಿಸುವ ಧೈರ್ಯ ತೋರಿಸಲಿ. ಬರೀ ನೋಟಿಸ್ ನೀಡಿದ್ದೇವೆಂಬ ನಾಟಕ ಮಾಡುವ ಅವಶ್ಯಕತೆಯಿಲ್ಲ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘಿಸಿ ಕುರಾನ್ ಶರಿಯಾ ಕಾನೂನು ಪಾಲಿಸುತ್ತೇವೆ ಎಂಬ ಮುಸ್ಲಿಂ ಸಮಾಜದ ಮಾನಸಿಕತೆ ಇದು ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಬೆಳಗ್ಗಿನ 5ಗಂಟೆಯ ಅಜಾನ್ ಮೈಕ್ ನ ಶಬ್ಧ ಕೇಳದಂತೆ ದೇವಸ್ಥಾನಗಳಲ್ಲಿ ಓಂಕಾರ, ಸುಪ್ರಭಾತದ ಸ್ವರವನ್ನು ಕೇಳಿಸಲಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.