ವೈದ್ಯೆ ವಿಸ್ಮಯ ಆತ್ಮಹತ್ಯೆ ಪ್ರಕರಣ: ಆರೋಪಿ ಪತಿಗೆ 10 ವರ್ಷ ಕಾರಾಗೃಹ ವಾಸ, 12.5 ಲಕ್ಷ ರೂ. ದಂಡ
Tuesday, May 24, 2022
ಕೊಲ್ಲಂ: ಕೇರಳ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದ ಯುವ ವೈದ್ಯೆ ವಿಸ್ಮಯಾ ಸಾವು ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರೋಪಿ ಪತಿ ಕಿರಣ್ ಕುಮಾರ್ಗೆ 10 ವರ್ಷ ಕಾರಾಗೃಹ ವಾಸ ಹಾಗೂ 12.5 ಲಕ್ಷ ರೂ. ದಂಡವನ್ನು ವಿಧಿಸಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ.ಎನ್. ಸುಜೀತ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ವಿಸ್ಮಯ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ದೊರಕಿದೆ.
ಆರೋಪಿ ಕಿರಣ್‌ಗೆ (ಐಪಿಸಿ ಸೆಕ್ಷನ್ 304ರನ್ವಯ 10 ವರ್ಷ ಶಿಕ್ಷೆ, ಐಪಿಸಿ ಸೆಕ್ಷನ್ 306ರನ್ವಯ 6 ವರ್ಷ ಶಿಕ್ಷೆ, ಐಪಿಸಿ ಸೆಕ್ಷನ್ 498ರನ್ವಯ 2 ವರ್ಷ ಶಿಕ್ಷೆ) ವಿವಿಧ ಆರೋಪಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲಿ ಕಿರಣ್ ಒಟ್ಟಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಜೊತೆಗೆ 12.5 ಲಕ್ಷ ರೂ. ದಂಡ ಪಾವತಿಸಬೇಕಿದೆ. ಇದರಲ್ಲಿ 2 ಲಕ್ಷ ರೂ. ಅನ್ನು ವಿಸ್ಮಯ ಪೋಷಕರಿಗೆ ನೀಡಲಾಗುವುದು.
ನ್ಯಾಯಾಲಯ ತೀರ್ಪಿನ ಬಗ್ಗೆ ಮಾತನಾಡಿರುವ ವಿಸ್ಮಯ ತಂದೆ ತ್ರಿವಿಕ್ರಮ್ ನಾಯರ್, ಶಿಕ್ಷೆ ವಿಧಿಸಿರುವುದು ಸಮಾಧಾನ ತಂದಿದೆ ಎಂದಿದ್ದಾರೆ. ಪೊಲೀಸರು ಹಾಗೂ ಪ್ರಾಸಿಕ್ಯೂಷನ್ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಆತನಿಗೆ ಜೀವಾವಧಿ ಶಿಕ್ಷೆಯ ನಿರೀಕ್ಷೆಯಲ್ಲಿದ್ದೆವು. ತೀರ್ಪಿನಿಂದ ನಿರಾಸೆಯಾಗಿದೆ. ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ಎಂದು ತಾಯಿ ಸರಿತಾ ಹೇಳಿದ್ದಾರೆ.
ಶಿಕ್ಷೆಯನ್ನು ಪ್ರಕಟಿಸುವ ಮೊದಲು, ನ್ಯಾಯಾಲಯವು ಕಿರಣ್‌ಗೆ ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಲಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್, ತಾನು ಯಾವುದೇ ಅಪರಾಧ ಮಾಡಿಲ್ಲ. ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಹೆತ್ತವರಿಗೆ ಆರೋಗ್ಯ ಸಮಸ್ಯೆ ಇದೆ. ನಾನು ನನ್ನ ಕುಟುಂಬದಲ್ಲಿ ಓರ್ವನೇ ಉದ್ಯೋಗಿ. ನನ್ನ ವಯಸ್ಸು ಕೇವಲ 31 ವರ್ಷ. ಆದ್ದರಿಂದ ನನ್ನ ವಯಸ್ಸನ್ನು ಪರಿಗಣಿಸಿ ನನ್ನ ಶಿಕ್ಷೆಯನ್ನು ತಗ್ಗಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಆದರೆ ವಿಸ್ಮಯ ಪರ ವಾದಿಸಿರುವ ವಕೀಲರು, ಕಿರಣ್ ವಿರುದ್ಧ ಪ್ರಮುಖ ನಿರ್ಣಯ ತೆಗೆದುಕೊಳ್ಳಕ್ಕೆಂದು ನ್ಯಾಯಾಲಯಕ್ಕೆ ವಿನಂತಿ ಮಾಡಿದ್ದಾರೆ. ಇದು ಓರ್ವ ವ್ಯಕ್ತಿಯ ವಿರುದ್ಧದ ಪ್ರಕರಣವಲ್ಲ. ಇದು ವರದಕ್ಷಿಣೆಯೆಂಬ ಸಾಮಾಜಿಕ ಪಿಡುಗಿನ ವಿರುದ್ಧದ ಪ್ರಕರಣ. ಸರ್ಕಾರಿ ನೌಕರನೊಬ್ಬ ವರದಕ್ಷಿಣೆಯನ್ನು ಸ್ವೀಕರಿಸಿದ್ದನ್ನು ನ್ಯಾಯಾಲಯ ಪರಿಗಣಿಸಬೇಕು. ಸರ್ಕಾರಿ ನೌಕರನು ತಾನು ಮೌಲ್ಯಯುತ ವ್ಯಕ್ತಿ ಎಂದು ನಂಬಬಾರದು. ಈ ತೀರ್ಪು ಸಮಾಜಕ್ಕೊಂದು ಪಾಠವಾಗಬೇಕು. ವರದಕ್ಷಿಣೆ ಹೆಸರಿನಲ್ಲಿ ಕ್ರೂರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ವಿಸ್ಮಯ ಆತ್ಮಹತ್ಯೆಯು ಕೊಲೆಗೆ ಸಮವಾಗಿದೆ. ಅಲ್ಲದೆ, ಆರೋಪಿಗೆ ಯಾವುದೇ ಪಶ್ಚಾತಾಪವಿಲ್ಲ. ಆತನ ಮೇಲೆ ಸಹಾನುಭೂತಿ ಹೊಂದಬಾರದು ಎಂದು ವಾದಿಸಿದ್ದರು.
ವಿಸ್ಮಯಳ ಮೊದಲ ಮರಣ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ನಿನ್ನೆ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಕಿರಣ್ನನ್ನು ಅಪರಾಧಿ ಎಂದು ಪರಿಗಣಿಸಿತು. ಶಿಕ್ಷೆಯನ್ನು ಪ್ರಮಾಣವನ್ನು ಇಂದು ಘೋಷಿಸಿದೆ. ಈ ಪ್ರಕರಣದಲ್ಲಿ 42 ಸಾಕ್ಷಿಗಳು, 120 ದಾಖಲೆಗಳು ಮತ್ತು 12 ಪ್ರಧಾನ ಸಾಕ್ಷಿಗಳಿವೆ.