10 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಉಪ ತಹಸೀಲ್ದಾರ್ ಗೆ 17 ವರ್ಷಗಳ ಘನಘೋರ ಶಿಕ್ಷೆ ವಿಧಿಸಿದ ನ್ಯಾಯಾಲಯ
Saturday, May 7, 2022
ತಿರುವನಂತಪುರಂ: 10 ವರ್ಷದ ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಉಪ ತಹಸೀಲ್ದಾರ್ನ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೇರಳ ನ್ಯಾಯಾಲಯ ಆತನಿಗೆ 17 ವರ್ಷಗಳ ಘನ ಘೋರ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ತಿರುವನಂತಪುರದ ಪ್ರಧಾನ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೆ.ವಿ.ರಾಜೇಶ್ ಈ ಮಹತ್ವದ ಆದೇಶವನ್ನು ನೀಡಿದ್ದಾರೆ.
ಅಲ್ಲದೆ ಆತ 16.5 ಲಕ್ಷ ರೂ. ದಂಡ ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಇನ್ನೆರಡು ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: 2019ರಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಮೃತಪಟ್ಟಿದ್ದರು. ಇದಾದ ಬಳಿಕ ಸಂತ್ರಸ್ತೆ ತನ್ನ ತಂದೆಯ ಜತೆ ಮಲಗಿಕೊಳ್ಳುತ್ತಿದ್ದಳು. ಆದರೆ ಉಪ ತಹಸೀಲ್ದಾರ್ ಆಗಿ ಜವಬ್ದಾರಿಯುತ ಸ್ಥಾನದಲ್ಲಿದ್ದ ತಂದೆ ಈ ಸಮಯದಲ್ಲಿ ದುರುದ್ದೇಶದಿಂದ ಪುತ್ರಿಯನ್ನು ತಬ್ಬಿಕೊಂಡು, ಆಕೆಯ ತುಟಿಯನ್ನು ಚುಂಬಿಸಿ, ಆಕೆಯ ಗುಪ್ತಾಂಗವನ್ನು ಸ್ಪರ್ಶಿಸುವುದನ್ನು ಮಾಡಿದ್ದಾನೆ.
ತರಗತಿಯಲ್ಲಿ ಸಂತ್ರಸ್ತೆ ಯಾವಾಗಲೂ ಮೌನವಾಗಿರುವುದನ್ನು ಗಮನಿಸಿದ ಶಿಕ್ಷಕಿ ಆಕೆಯನ್ನು ವಿಚಾರಿಸಿದಾಗ ತಂದೆಯಿಂದ ಲೈಂಗಿಕ ದೌರ್ಜ್ಯನ್ಯ ಎದುರಿಸುತ್ತಿರುವುದಾಗಿ ಹೇಳಿದ್ದಾಳೆ. ಈ ವಿಚಾರವನ್ನು ಶಿಕ್ಷಕಿ, ಮುಖ್ಯೋಪಾಧ್ಯಯರಿಗೆ ಮತ್ತು ಶಾಲೆಯ ಕೌನ್ಸಿಲರ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ತಂದೆಯ ವಿರುದ್ಧ ಕೇರಳದ ಪಂಗೋಡ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಅಪರಾಧ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎ. ಪ್ರಮೋದ್ ಕುಮಾರ್ ತನಿಖೆ ನಡೆಸಿ, ಆರೋಪಿ ತಂದೆಯ ವಿರುದ್ಧ ಚಾರ್ಜ್ಶೀಟ್ ದಾಖಲಿಸುತ್ತಾರೆ. ಪುತ್ರಿಯನ್ನು ಪೋಷಣೆ ಮಾಡಬೇಕಾದ ತಂದೆಯೇ ಆಕೆಯ ಮೇಲೆ ದೌರ್ಜನ್ಯ ಎಸಗಿರುವುದು ಘೋರ ಅಪರಾಧ ಮತ್ತು ಆರೋಪಿಯು ಯಾವುದೇ ಕರುಣೆಗೆ ಅರ್ಹನಲ್ಲ ಎಂದು ನ್ಯಾಯಾಲಯ ಅಂತಿಮವಾಗಿ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಗೆ ಕಾನೂನಾತ್ಮಕವಾಗಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. ಘಟನೆಯಲ್ಲಿ, ಪ್ರಾಸಿಕ್ಯೂಷನ್ ಕಡೆಯಿಂದ 19 ಸಾಕ್ಷಿಗಳನ್ನು ಪರೀಕ್ಷಿಸಲಾಯಿತು ಮತ್ತು 21 ದಾಖಲೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ.