ಕಡಬ: ಸಮುದಾಯ ಆಸ್ಪತ್ರೆ ಸಿಬ್ಬಂದಿ ಎಡವಟ್ಟು: ವ್ಯಕ್ತಿಯ ಗಾಯದೊಳಗೆ 14 ಕಲ್ಲುಗಳು!
Thursday, May 5, 2022
ಕಡಬ: ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯೋರ್ವರ ಗಾಯದೊಳಗಿದ್ದ ಬರೋಬ್ಬರಿ 14 ಕಲ್ಲುಗಳನ್ನು ಹಾಗೆಯೇ ಬಿಟ್ಟು, ಶುಚಿಗೊಳಿಸದೆ ಗಾಯಕ್ಕೆ ಹೊಲಿಗೆ ಹಾಕಿ ಕಡಬದ ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ಪರಿಣಾಮ ಗಾಯ ಉಲ್ಬಣಗೊಂಡು ಗಾಯಾಳು ನೋವು ಅನುಭವಿಸುವಂತಾಗಿದೆ. ಇದೀಗ ಗಾಯಾಳು ಖಾಸಗಿ ಆಸ್ಪತ್ರೆಯ ಕದ ತಟ್ಟಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಗಾಯದೊಳಗಿದ್ದ 14 ಕಲ್ಲುಗಳನ್ನು ಹೊರತೆಗೆಯಲಾಗಿದೆ. ಈ ಮೂಲಕ ಗಾಯಾಳು ನಿಟ್ಟುಸಿರು ಬಿಡುವಂತಾಗಿದೆ.
ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೇ ಉದ್ಯೋಗಿ ಪುರುಷೋತ್ತಮ ಎಂಬವರು ಎ.25ರಂದು ರಾತ್ರಿ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದ್ದರು. ಪರಿಣಾಮ ಅವರ ಮೊಣಗಾಲಿಗೆ ಗಾಯವಾಗಿತ್ತು. ತಕ್ಷಣ ಪುರುಷೋತ್ತಮರನ್ನು ಕಡಬ ಸಮುದಾಯ ಆಸ್ಪತ್ರೆಗೆ ಸ್ಥಳೀಯರು ಕರೆದೊಯ್ದು ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸಿಬ್ಬಂದಿಗೆ ಸೂಚಿಸಿದ್ದರೆ. ಅದರಂತೆ ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿ ಗಾಯಕ್ಕೆ ಸ್ಟಿಚ್ ಹಾಕಿದ್ದಾರೆ.
ಆದಾಗಿ ವಾರದ ಬಳಿಕವೂ ಗಾಯ ಗುಣವಾಗದೆ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಗಾಯಾಳು ಪುರುಷೋತ್ತಮರವರು ಮೇ.4ರಂದು ಕಡಬದ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಗಾಯದ ಎಕ್ಸರೆ ತೆಗೆಸಿದ್ದಾರೆ. ಬಳಿಕ ಅಲ್ಲಿನ ಕ್ಲಿನಿಕ್ ನಲ್ಲಿದ್ದ ತಜ್ಞ ವೈದ್ಯರಿಗೆ ತೋರಿಸಿದ್ದರು. ವೈದ್ಯರು ಎಕ್ಸರೇಯನ್ನು ಪರಿಶೀಲಿಸಿ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಆ ಹಿನ್ನಲೆಯಲ್ಲಿ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ಮೇ.4ರಂದು ರಾತ್ರಿ ಸರ್ಜರಿ ನಡೆಸಲಾಗಿದೆ. ಈ ವೇಳೆ ವೈದ್ಯರು ಗಾಯದೊಳಗಿನಿಂದ ಬರೋಬ್ಬರಿ 14 ಕಲ್ಲುಗಳು ಹೊರತೆಗೆದಿದ್ದಾರೆ. ಗಾಯಗೊಂಡ ಆ ದಿನವೇ ಸ್ಟಿಚ್ ಮಾಡುವ ಸಂದರ್ಭದಲ್ಲಿ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡುತ್ತಿದ್ದರೆ ಗಾಯ ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.