ನೇಪಾಳ: ಟೇಕ್ ಆಫ್ ಆಗಿ 15 ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡಿದ್ದ ವಿಮಾನ 6 ಗಂಟೆಯ ಬಳಿಕ ಪತ್ತೆ!
Sunday, May 29, 2022
ಕಠ್ಮಂಡು (ನೇಪಾಳ) : ಟೇಕ್ ಆಫ್ ಆಗಿ ಕೇವಲ 15 ನಿಮಿಷಗಳಲ್ಲಿ ನಾಪತ್ತೆಯಾಗಿದ್ದ ನೇಪಾಳದ ವಿಮಾನ ಸುಮಾರು ಆರು ಗಂಟೆಗಳ ಬಳಿಕ ಪತ್ತೆಯಾಗಿದೆ. ಈ ವಿಮಾನದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತಾರಾ ಏರ್ 9-ಎನ್ಎಇಟಿ ವಿಮಾನವು ಇಂದು ಬೆಳಗ್ಗೆ 9:55ಕ್ಕೆ ಪೋಖರಾದಿಂದ ಜೋಮ್‌ಸಮ್‌ಗೆ ಟೇಕ್ ಆಫ್ ಆಗಿತ್ತು. ಆದರೆ ಆ ಬಳಿಕ ವಿಮಾನವು ಸಂಪರ್ಕ ಕಳೆದುಕೊಂಡಿತ್ತು.
ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪ ಈ ವಿಮಾನವು ಪತನಗೊಂಡಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ತಕ್ಷಣ ನೇಪಾಳದ ಸೇನೆ ವಿಮಾನ ಪತನವಾಗಿದೆ ಎಂದು ಹೇಳಲಾಗುತ್ತಿರುವ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್ ತಿಳಿಸಿದ್ದಾರೆ. ಪೋಖರಾದಿಂದ ಟೇಕ್ ಆಫ್ ಆದ ಕೆಲ ನಿಮಿಷದಲ್ಲೇ ಲೇಟೆಪಾಸ್ ಪ್ರದೇಶದಲ್ಲಿ ವಿಮಾನವು ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಇದೀಗ ವಿಮಾನದ ಪತ್ತೆಗಾಗಿ ಈ ಮಾರ್ಗದಲ್ಲಿ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು.
ಈ ವಿಮಾನದಲ್ಲಿ 4 ಮಂದಿ ಭಾರತೀಯರು ಮತ್ತು 3ಮಂದಿ ಜಪಾನ್ ಪ್ರಜೆಗಳು, ಎರಡು ಮಂದಿ ಜರ್ಮನ್ ಪ್ರಜೆಗಳು ಮತ್ತು 13 ಮಂದಿ ನೇಪಾಳದ ಪ್ರಜೆಗಳಿದ್ದರು. ಜತೆಗೆ ಮೂವರು ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 22 ಮಂದಿ ಪ್ರಯಾಣಿಕರಿದ್ದರು. ಆದರೆ, ಸಾವು-ನೋವಿನ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.