ಮದುವೆಯ ನೆಪದಲ್ಲಿ ಬರೋಬ್ಬರಿ 15 ಯುವಕರಿಗೆ ವಂಚಿಸಿದ ಖತರ್ನಾಕ್ ಮಹಿಳೆ ಅರೆಸ್ಟ್
Friday, May 27, 2022
ಭೋಪಾಲ್: ಹಲವಾರು ಯುವಕರನ್ನು ಮದುವೆಯ ಹೆಸರಿನಲ್ಲಿ ವಂಚನೆ ಮಾಡಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಂಚಕಿಯೊಬ್ಬಳನ್ನು ಭೋಪಾಲ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಈಕೆ ಬೇರೆ ಬೇರೆ ಹೆಸರಿನ ಮೂಲಕ ಯುವಕರನ್ನು ವಿವಾಹ ಮಾಡಿಕೊಳ್ಳುವ ಮೂಲಕ ಬರೋಬ್ಬರಿ 15 ಮಂದಿಗೆ ವಂಚನೆ ಮಾಡಿದ್ದಾಳೆ. ಈ ಖತರ್ನಾಕ್ ಮಹಿಳೆ ವಿವಾಹವಾಗಿ ಹನಿಮೂನ್ ಹೆಸರಿನಲ್ಲಿ ಅವರಿಗೆಲ್ಲ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಭೋಪಾಲ್ ಜಿಲ್ಲೆಯ ಬುಧ್ವಾರದ ಸೀಮಾ(32) ಬಂಧಿತ ವಂಚಕಿ ಮಹಿಳೆ.
ಈ ಖತರ್ನಾಕ್ ಮಹಿಳೆ ಪೂಜಾ, ರಿಯಾ, ರೀನಾ, ಸುಲ್ತಾನಾ ಎಂಬ ಹೆಸರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಬರೋಬ್ಬರಿ 15 ವಿವಾಹವಾಗಿದ್ದಾಳೆ. ಜೊತೆಗೆ ವಿವಿಧ ಸ್ಥಳಗಳಲ್ಲಿ ವಾಸಿಸುವ ಮೂಲಕ ಪೊಲೀಸರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಳು. ಆಕೆಯ ವಿರುದ್ಧ ಉಜ್ಜೈನಿ, ಜಬಲ್ಪುರ್, ನರ್ಮದಾಪುರಂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಂಚನೆಯ ದೂರು ದಾಖಲಾಗಿವೆ. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣಡ ವೇಳೆ ಈಕೆ ಕಳೆದೆರಡು ವರ್ಷಗಳಲ್ಲಿ ಬರೋಬ್ಬರಿ 15 ಯುವಕರನ್ನು ವಿವಾಹವಾಗಿ ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.
ಈಕೆ ಕೋವಿಡ್ ಸಂದರ್ಭ ಅನೇಕ ಹಳ್ಳಿಗಳಲ್ಲಿ ಮದುವೆ ಹೆಸರಿನಲ್ಲಿ ಜನರನ್ನು ಮದುವೆಯ ನೆಪದಲ್ಲಿ ಮೋಸ ಮಾಡಿದ್ದಾಳೆ. ಎರಡು ವರ್ಷಗಳ ಹಿಂದೆ ಸೀಮಾ ವಿರುದ್ಧ ಕಾಂತಪ್ರಸಾದ್ ಎಂಬುವವರು ದೂರು ದಾಖಲು ಮಾಡಿದ್ದರು. ಅಂದಿನಿಂದ ಈಕೆಯ ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದರು. ಇದೀಗ ಆಕೆಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈಕೆ ಮದುವೆಯಾಗುವ ನೆಪದಲ್ಲಿ ಮೋಸ ಮಾಡಿ ಲಕ್ಷಗಟ್ಟಲೆ ಹಣ ಲಪಟಾಯಿಸಿದ್ದಾಳೆ. ಮದುವೆಯಾದ ಬಳಿಕ ಹನಿಮೂನ್ ಅಥವಾ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಎಂದು ಹೇಳಿ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದಳೆಂದು ಡಿಸಿಪಿ ಶೈಲೆಂದ್ರ ಚೌಹಾಣ್ ತಿಳಿಸಿದ್ದಾರೆ.