ಮಂಗಳೂರು: ಮಹಿಳೆಯ ನಂಬಿಕೆ ಗಳಿಸಿ ಲೈಂಗಿಕ ಸಂಪರ್ಕ ಬೆಳೆಸಿ 1.50 ಕೋಟಿ ರೂ. ವಂಚನೆ; ಕಾಮುಕ ಅರೆಸ್ಟ್
Friday, May 20, 2022
ಮಂಗಳೂರು: ಮನೆ ಮಗನಂತೆ ಎಲ್ಲರ ನಂಬಿಕೆ ಗಳಿಸಿ ಮನೆಯೊಡತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ 1.50 ಕೋಟಿ ರೂ. ವಂಚಿಸಿರುವ ಆರೋಪದಲ್ಲಿ ಯುವಕನೋರ್ವನನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ವಿಟ್ಲ ಬೈರಿಕಟ್ಟೆಯ ನಿವಾಸಿ ಫಯಾಝ್(30) ಬಂಧಿತ ಆರೋಪಿ.
ಆರೋಪಿ ಫಯಾಝ್ ಗೆ ಸಂತ್ರಸ್ತ ಮಹಿಳೆ 2012ರಲ್ಲಿ ಪರಿಚಿತನಾಗಿದ್ದ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಈತ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಈ ಮೂಲಕ ಸಂತ್ರಸ್ತೆಯ ಕುಟುಂಬದ ನಂಬಿಕೆಯನ್ನು ಗಳಿಸಿದ್ದ. ಮಹಿಳೆಗೆ ಮೂವರು ಮಕ್ಕಳಿದ್ದು, ಅವರಲ್ಲಿ ಇಬ್ಬರು ವಿಶೇಷ ಚೇತನರಾಗಿದ್ದಾರೆ. ಆತ ಅವರ ಮೇಲೆ ಕರುಣೆ ತೋರಿಸುವಂತೆ ಶಾಲೆಗೆ ಕರೆದೊಯ್ಯುವಂತೆ, ಇನ್ನಿತರ ಸಹಕಾರ ನೀಡುವ ನಾಟಕವಾಡುತ್ತಿದ್ದ. ಹೀಗೆ ಹಂತಹಂತವಾಗಿ ಕುಟುಂಬದ ಎಲ್ಲರ ನಂಬಿಕೆಯನ್ನು ಗಳಿಸಿದ್ದ. ಮಹಿಳೆಯ ಪತಿ ಉದ್ಯಮಿಯಾಗಿದ್ದು, ಸಾಕಷ್ಟು ಸ್ಥಿತಿವಂತರೂ ಆಗಿದ್ದರು. ಹೀಗೆ ಅವರಲ್ಲಿದ್ದ ಹಣ ಹಾಗೂ ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಆತ ಎರಡನ್ನೂ ದುರ್ಬಳಕೆ ಮಾಡಿದ್ದಾನೆ.
ಮನೆಮಂದಿಯ ನಂಬಿಕೆ ಗಳಿಸಿದ ಫಯಾಝ್ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಅಲ್ಲದೆ ಆಕೆಯಿಂದ ಹಂತಹಂತವಾಗಿ 1.50 ಕೋಟಿ ರೂ. ನಷ್ಟು ಹಣವನ್ನು ಪಡೆದಿದ್ದ. ಇದೀಗ ಆತ ಬೇರೊಂದು ಯುವತಿಯನ್ನು ವಿವಾಹವಾಗಲು ಅಣಿಯಾಗುತ್ತಿದ್ದಂತೆ ಆತನ ವಿರುದ್ಧ ಸಂತ್ರಸ್ತೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.