ಮಂಗಳೂರು: 2024ರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ; ಪೇಜಾವರ ಶ್ರೀಗಳು
Friday, May 20, 2022
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. 2024ರ ಜನವರಿಯಲ್ಲಿ ಅಂದರೆ ಉತ್ತರಾಯಣ ಪ್ರಾರಂಭದಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನಾ ಕಾರ್ಯ ಮಾಡಲಾಗುವ ನಿಶ್ಚಯ ಕೈಗೊಳ್ಳಲಾಗಿದೆ. ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ಪೂರ್ವಭಾವಿ ಕಾರ್ಯಗಳೆಲ್ಲವೂ ನಿಗದಿತ ಸಮಯದಲ್ಲಿಯೇ ನಡೆಯುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಅಯೋಧ್ಯೆಯಲ್ಲಿ ಭೂಮಿಯನ್ನು ದೃಢಪಡಿಸುವ ಕಾರ್ಯ ನಡೆಯಿತು. ಇದೀಗ ಫ್ಲ್ಯಾಟ್ ಫಾರ್ಮ್ ರಚನೆಯೂ ಸಂಪೂರ್ಣಗೊಳ್ಳುತ್ತಾ ಬಂದಿದೆ. ಕರುನಾಡಿನಿಂದಲೇ ಹೋಗಿರುವ ಶಿಲೆಗಳಿಂದ ಫ್ಲ್ಯಾಟ್ ಫಾರ್ಮ್ ನಿರ್ಮಾಣವಾಗಿದೆ. ಗರ್ಭಗುಡಿಯ ಶಿಲಾನ್ಯಾಸ ಕಾರ್ಯವು ಜೂನ್ 1ರಂದು ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ವಾರಣಾಸಿಯ ಗ್ಯಾನವ್ಯಾಪಿ ಮಂದಿರದ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ವಿಚಾರದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ನಮ್ಮ ಈ ತನಕದ ನಂಬಿಕೆಗಳು, ಪುರಾಣಗಳ ಉಲ್ಲೇಖಗಳು ಸತ್ಯವೆಂದು ಪ್ರತ್ಯಕ್ಷೀಕರಿಸುತ್ತಿದೆ. ಹಾಗಾಗಿ ಇದನ್ನು ನಾವು ಹತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಮಾತ್ರವಲ್ಲ ಇಂತಹ ಅತಿಕ್ರಮಗಳೆಲ್ಲವೂ ಬೇಗನೆ ದೂರವಾಗಿ, ಭಾರತೀಯ ಸನಾತನ ಸಂಸ್ಕೃತಿಗೆ ವಿಜಯದೊರಕಲೆಂದು ಆಶಿಸುತ್ತಿದ್ದೇವೆ. ಇವೆಲ್ಲವೂ ಕೋರ್ಟ್ ತೀರ್ಪು ಮುಖೇನ ನಡೆಯುತ್ತಿದೆ. ಆದ್ದರಿಂದ ಯಾರೂ ಸಂಘರ್ಷಕ್ಕೆ ಇಳಿಯದೆ ಸ್ವಾಗತಿಸಬೇಕು ಎಂದರು.