ಬುಡಕಟ್ಟು ಜನಾಂಗದ ಮಹಿಳೆಯ ಅತ್ಯಾಚಾರವೆಸಗಿ ಕೊಲೆ: 24 ಗಂಟೆಯೊಳಗೆ ಆರೋಪಿ ಅರೆಸ್ಟ್
Wednesday, May 11, 2022
ಯಾದಾದ್ರಿ(ತೆಲಂಗಾಣ): ಬುಡಕಟ್ಟು ಪಂಗಡದ ವಿವಾಹಿತ ಮಹಿಳೆಯೋರ್ವಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ, ಕೊಲೆಗೈದಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಪ್ರಕರಣ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಬುಡಗಟ್ಟು ಜನಾಂಗದ ಕೃಷ್ಣ ಹಾಗೂ ಲಾವಣ್ಯ ದಂಪತಿ ತೂಪ್ರಾಣಪೇಟೆಯಲ್ಲಿ ವಾಸವಾಗಿದ್ದರು. ಕೃಷ್ಣ ಹತ್ತಿರದ ಕಾಲೇಜ್ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದರು. ಮೇ.9ರಂದು ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭ ಹರೀಶ್ ಗೌಡ ಎಂಬಾತ ಅವರ ಪತಗನಿ ಲಾವಣ್ಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಕೊಲೆಗೈದು ಪರಾರಿಯಾಗಿದ್ದಾನೆ.
ಕೆಲಸ ಮುಗಿಸಿ ವಾಪಸ್ ಮನೆಗೆ ಬಂದಿರುವ ಕೃಷ್ಣರಿಗೆ ಪತ್ನಿ ಮನೆಯಲ್ಲಿ ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಮನೆಯ ಪಕ್ಕದ ಹುಲ್ಲಿನ ಬಣವೆ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಎಸಿಪಿ ಉದಯ್ ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ, ಹರೀಶ್ ಗೌಡ ಕಟ್ಟಡ ನಿರ್ಮಾಣ ಕಾಮಗಾರಿಯ ದಿನಗೂಲಿ ನೌಕರನಾಗಿದ್ದ. ಕಳೆದ ಕೆಲವು ದಿನಗಳ ಹಿಂದೆ ಕೃಷ್ಣ ವಾಸವಿದ್ದ ಮನೆಯ ಪಕ್ಕದಲ್ಲಿಯೇ ಇದ್ದ ಡೈರಿ ಉತ್ಪನ್ನಗಳ ಕಂಪೆನಿಯಲ್ಲಿ ಕೆಲಸ ಮಾಡಲು ಆರಂಭಿಸಿದ್ದಾನೆ. ಈ ವೇಳೆ, ಲಾವಣ್ಯ ಮೇಲೆ ಆತನ ಕಾಮುಕ ದೃಷ್ಟಿ ಬಿದ್ದಿದೆ. ಜೊತೆಗೆ ಆಕೆ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ್ದಾನೆ. ಮೇ. 9ರಂದು ಮಹಿಳೆ ವಾಶ್ರೂಮ್ ಬಳಸಲು ಹೊರಗಡೆ ಹೋದಾಗ ಹರೀಶ್ ಗೌಡ ಅಲ್ಲಿಗೆ ತೆರಳಿ, ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಅವರು ಕಿರುಚಾಡಿದ್ದಾಳೆ.
ಅತ್ಯಾಚಾರ ಎಸಗಿರುವ ಆರೋಪಿ ಬಳಿಕ ಆಕೆಯನ್ನು ಕಟ್ಟಿಗೆಯಿಂದ ತಲೆಯ ಮೇಲೆ ಹಲ್ಲೆ ನಡೆಸಿ. ಘಟನೆಗೆ ಸಂಬಂಧಿಸಿದಂತೆ ಪತಿಗೆ ಹೇಳುವುದಾಗಿ ಲಾವಣ್ಯ ಹೇಳಿಕೊಂಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಹರೀಶ್ ಆಕೆಯ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿ, ಕೊರಳಿನಲ್ಲಿರುವ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಹಲ್ಲೆಯಿಂದಾಗಿ ಅಧಿಕ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.