ಮಂಗಳೂರು: ಪೊಲೀಸ್ ಪ್ರಕರಣದಿಂದ ಹೆಸರು ತೆಗೆಸುವುದಾಗಿ ನಂಬಿಸಿ 2.95 ಲಕ್ಷ ರೂ. ವಂಚಿಸಿದ ಗ್ರಾಪಂ ಸದಸ್ಯ ಅರೆಸ್ಟ್
Friday, May 13, 2022
ಮಂಗಳೂರು: ಪೊಲೀಸರು ದಸ್ತಗಿರಿ ಮಾಡಲು ಹುಡುಕಾಡುತ್ತಿದ್ದ ದರೋಡೆ ಪ್ರಕರಣದ ಆರೋಪಿಗೆ ಪ್ರಭಾವ ಬಳಸಿ ಪ್ರಕರಣದಿಂದಲೇ ಹೆಸರು ತೆಗೆಸುವುದಾಗಿ ನಂಬಿಸಿ 2.95 ಲಕ್ಷ ರೂ. ಸುಲಿಗೆ ಮಾಡಿರುವ ಗ್ರಾಪಂ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಪಾವೂರು ನಿವಾಸಿ ಅಬ್ದುಲ್ ಖಾದರ್ ರಿಝ್ವಾನ್(28) ಬಂಧಿತ ಆರೋಪಿ.
2021ರ ಡಿಸೆಂಬರ್ ನಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿಯೊಬ್ಬನು ದಸ್ತಗಿರಿಯಾಗದೆ ಉಳಿದಿದ್ದ. ಪೊಲೀಸರು ಆತನ ಹುಡುಕಾಟದಲ್ಲಿದ್ದರು. ಈ ಸಂದರ್ಭ ಆತನನ್ನು ಇಬ್ಬರು ಸಂಪರ್ಕಿಸಿ, 'ದರೋಡೆ ಪ್ರಕರಣದಲ್ಲಿದ್ದ ನಿನ್ನ ಹೆಸರನ್ನು ಪೊಲೀಸರಿಗೆ ಹಣ ನೀಡಿ ಪ್ರಭಾವ ಬೀರಿ ತೆಗೆಸುತ್ತೇವೆ. ಅದಕ್ಕೆ 3 ಲಕ್ಷ ರೂ. ಹಣ ನೀಡಬೇಕು' ಎಂದು ಡಿಮ್ಯಾಂಡ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದರೋಡೆ ಪ್ರಕರಣದ ಆರೋಪಿ ಹಂತ ಹಂತವಾಗಿ ಒಟ್ಟು 2.95 ಲಕ್ಷ ರೂ. ಹಣವನ್ನು ಅವರಿಗೆ ನೀಡಿದ್ದಾನೆ.
ಆದರೆ ಹಣ ನೀಡಿದ ಬಳಿಕವೂ ಪೊಲೀಸರು ಆತನನ್ನು ಹುಡುಕುತ್ತಿದ್ದ ವಿಚಾರ ತಿಳಿದ ಆತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ. ಆ ಬಳಿಕ ತಾನು ನೀಡಿರುವ 2.95 ಲಕ್ಷ ರೂ. ಮರಳಿ ಕೇಳಿದ್ದಾನೆ. ಆರೋಪಿಗಳು ಮತ್ತೆ ಕರೆ ಮಾಡಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ ಮತ್ತೆ 30,000 ರೂ. ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆತ ಹಣ ಪಡೆದ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅದರಂತೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ಗ್ರಾಮ ಪಂಚಾಯತ್ ಸದಸ್ಯನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.