ಸೊಸೆ ವರ್ಷದೊಳಗೆ ಗರ್ಭಿಣಿಯಾಗಬೇಕು, ಇಲ್ಲಾಂದ್ರೆ 5 ಕೋಟಿ ರೂ. ಪರಿಹಾರ ನೀಡಲಿ: ದಾವೆ ಹೂಡಿದ ಹತ್ತವ್ವೆ
Friday, May 13, 2022
ಹರಿದ್ವಾರ: ಸೊಸೆ ವರ್ಷದೊಳಗೆ ಮಗು ಹೆತ್ತುಕೊಡಬೇಕು, ಇಲ್ಲದಿದ್ದಲ್ಲಿ 5 ಕೋಟಿ ರೂ. ಪರಿಹಾರ ನೀಡಬೇಕೆಂದು ದಾವೆ ಹೂಡಿದ ಹತ್ತವ್ವೆ ನ್ಯಾಯಾಲಯಕ್ಕೆ ದಾವೆ ಹೂಡಿರುವ ವಿಚಿತ್ರ ಪ್ರಕರಣವೊಂದು ಹರಿದ್ವಾರದಲ್ಲಿ ನಡೆದಿದೆ.
ಹರಿದ್ವಾರದ ಮಹಿಳೆಯೋರ್ವರು ಈ ರೀತಿಯಲ್ಲಿ ತಮಗೆ ನ್ಯಾಯ ಸಿಗಬೇಕೆಂದು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಈಕೆ ಸ್ವತಃ ತಮ್ಮ ಪುತ್ರ ಹಾಗೂ ಸೊಸೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಈಕೆಯ ಪ್ರಕಾರ ತಮ್ಮಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ಮಗ - ಸೊಸೆ ವರ್ಷದೊಳಗೆ ಮಗು ಹೆತ್ತು ಕೊಡದಿದ್ದರೆ 5 ಕೋಟಿ ರೂ. ಪರಿಹಾರ ಕೊಡಬೇಕೆಂದು ಆದೇಶಿಸಬೇಕೆಂದು ಕೋರ್ಟ್ ಮುಂದೆ ಅವಲತ್ತುಕೊಂಡಿದ್ದಾರೆ.
ತಮ್ಮ ಪುತ್ರನನ್ನು ಕಷ್ಟಪಟ್ಟು ಓದಿಸಿದ್ದೇವೆ. ಆತನ ಓದಿಗೆಂದು ಲಕ್ಷಾಂತರ ರೂ. ಖರ್ಚು ಮಾಡಿದ್ದೆವು. ಅವನಿಗೆ ಪೈಲೆಟ್ ಹುದ್ದೆ ದೊರಕಲು ಸಾಕಷ್ಟು ಕಷ್ಟಪಟ್ಟಿದ್ದೆವು. ಕೊನೆಗೆ ಆತನ ಮದುವೆ ಮಾಡಿ ತಮ್ಮ ಸ್ವಂತ ಹಣದಲ್ಲಿ ಥೈಲ್ಯಾಂಡ್ ಗೆ ಹನಿಮೂನ್ ಗೂ ಕಳಿಸಿದ್ದೆವು. ಇದೀಗ ನಮ್ಮ ಬಳಿ ಹಣವಿಲ್ಲ. ಸಾಲ ಮಾಡಿ ಜೀವನ ನಡೆಸುವ ಹಂತಕ್ಕೆ ತಲುಪಿದ್ದೇವೆ. ಆದರೆ ಪುತ್ರನೀಗ ಪತ್ನಿ ಮಾತು ಕೇಳಿ ಹೆತ್ತ ಅಪ್ಪ - ಅಮ್ಮನನ್ನೇ ಕಡೆಗಣಿಸುತ್ತಿದ್ದಾನೆ ಎಂದು ಕೋರ್ಟ್ ಮುಂದೆ ಅವಲತ್ತುಕೊಂಡಿದ್ದಾರೆ.
ವಿವಾಹವಾದ ಬಳಿಕ ಪುತ್ರ ತಮ್ಮನ್ನು ತೊರೆದು ಪತ್ನಿಯೊಂದಿಗೆ ಹೈದರಾಬಾದ್ ನಲ್ಲಿ ಸೆಟ್ಲ್ ಆಗಿದ್ದಾನೆ. ಇಬ್ಬರೂ ನಮ್ಮೊಂದಿ ಮಾತು ಬಿಟ್ಟಿದ್ದಾರೆ. ಮಗ ನಮ್ಮ ಖರ್ಚಿಗೂ ಹಣ ಕೊಡುತ್ತಿಲ್ಲ. ಪ್ರತೀ ನಿರ್ಧಾರಕ್ಕೂ ಪತ್ನಿಯ ಮಾತು ಕೇಳುತ್ತಿದ್ದಾನೆ ಎಂದು ಹೇಳಿದ್ದಾರೆ.