ಹುಬ್ಬಳ್ಳಿ: ಬಸ್ - ಲಾರಿ ನಡುವೆ ತಡರಾತ್ರಿ ಭೀಕರ ಅಪಘಾತ: 7ಮಂದಿ ಬಲಿ, 25ಕ್ಕೂ ಅಧಿಕ ಮಂದಿಗೆ ಗಾಯ
Tuesday, May 24, 2022
ಹುಬ್ಬಳ್ಳಿ: ಧಾರವಾಡದಲ್ಲಿ ನಡೆದಿರು ಭೀಕರ ಅಪಘಾತದ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಏಳು ಮಂದಿ ಅಸುನೀಗಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ತಡರಾತ್ರಿ 12.45ರ ಸುಮಾರಿಗೆ ಹುಬ್ಬಳ್ಳಿ ಗೋಕುಲ್ ರಸ್ತೆಯ ರಾಯನಾಳದಲ್ಲಿ ಬಸ್ ಹಾಗೂ ಲಾರಿ ನಡುವೆ ನಡೆದಿರುವ ಭೀಕರ ಅಪಘಾತದಲ್ಲಿ ಈ ಸಾವು ಸಂಭವಿಸಿದೆ. ಕೊಲ್ಲಾಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ಅಕ್ಕಿ ಸಾಗಾಟದ ಲಾರಿ ಮುಖಾಮುಖಿಯಾಗಿ ಢಿಕ್ಕಿಯಾಗಿದೆ. ಪರಿಣಾಮ ಲಾರಿ ಡ್ರೈವರ್, ಕ್ಲೀನರ್ ಹಾಗೂ ಬಸ್ ನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಘಟನೆಯಲ್ಲಿ 25ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.