ಬಸ್ ಗಾಗಿ ಕಾಯುತ್ತಿದ್ದ ಯುವಕನ ಕೈಗೆ 9ತಿಂಗಳ ಹಸುಗೂಸನ್ನು ನೀಡಿ ಅಪರಿಚಿತ ಮಹಿಳೆ ಪರಾರಿ
Tuesday, May 10, 2022
ಮೈಸೂರು: 9 ತಿಂಗಳ ಪುಟ್ಟಮಗುವೊಂದನ್ನು ಬಸ್ ತಂಗುದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ಎಂಬವರು, ಬಸ್ ಗಾಗಿ ಕಾಯುತ್ತಿದ್ದರು. ಈ ಸಂದರ್ಭ ಅವರ ಕೈಗೆ ಪುಟ್ಟಕೂಸನ್ನು ನೀಡಿ ಮಹಿಳೆ ನಾಪತ್ತೆಯಾಗಿದ್ದಾಳೆ. ಸದ್ಯ ಈ ಮಗುವನ್ನು ರಘು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಹೆಚ್.ಡಿ.ಕೋಟೆಯ ನಿವಾಸಿವಾಗಿರುವ ರಘು ಅವರು ಕಾರ್ಯ ನಿಮಿತ್ತ ರಾಯಚೂರಿಗೆ ತೆರಳಿದ್ದರು. ಮತ್ತೆ ಮರಳಿ ಮೈಸೂರಿಗೆ ಬರಲು ಅವರು ರಾಯಚೂರು ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದರು.
ಈ ಸಂದರ್ಭ ಅಲ್ಲಿಗೆ ಬಂದಿರುವ ಅಪರಿಚಿತ ಮಹಿಳೆ ಮಗುವನ್ನು ರಘು ಕೈಗೆ ನೀಡಿ ನಾಪತ್ತೆಯಾಗಿದ್ದಾರೆ. ಮಗು ಕೊಟ್ಟ ಮಹಿಳೆ 3 ಗಂಟೆಯಾದರೂ ವಾಪಸ್ಸು ಬಾರದ ಹಿನ್ನೆಲೆಯಲ್ಲಿ ರಘು ಮಗುವಿನೊಂದಿಗೆ ಮೈಸೂರಿಗೆ ಬಂದಿದ್ದಾರೆ. ಬಳಿಕ ರಘು ಮಗುವನ್ನು ರಕ್ಷಿಸಿ ಲಷ್ಕರ್ ಪೊಲೀಸ್ ಠಾಣೆಗೆ ನೀಡಿದ್ದಾರೆ. ಮಗುವಿನ ಆರೈಕೆ ಮಾಡಿರುವ ಸಿಬ್ಬಂದಿ ಮಗುವನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಮಗುವಿನ ತಾಯಿ ಪತ್ತೆ ಮಾಡಲೆಂದು ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.