ಮಳಲಿಯ ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕ ಉತ್ತರವೇನು? 9 ವೀಳ್ಯದೆಲೆಯಲ್ಲಿ ಏನೇನು ಕಂಡಿತು? - COMPLETE STORY
Wednesday, May 25, 2022
ಮಂಗಳೂರು: ವಾರಣಾಸಿಯ ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗಪತ್ತೆ, ಮಥುರಾ ಶ್ರೀಕೃಷ್ಣ ಜನ್ಮಭೂಮಿಯ ಅತಿಕ್ರಮಿತ ಶಾಹಿ ಈದ್ಗಾ ಮಸೀದಿಯ ಶುದ್ಧೀಕರಣ ವಿವಾದ ದೇಶಾದ್ಯಂತ ಭಾರೀ ಚರ್ಚೆಗೊಳಗಾಗುತ್ತಿವೆ. ಈ ನಡುವೆ ಮಂಗಳೂರು ನಗರದಲ್ಲಿನ ಮಸೀದಿಯೊಂದರಲ್ಲಿ ದೇವಾಲಯ ಶೈಲಿಯ ಕಟ್ಟಡ ಪತ್ತೆಯ ವಿಚಾರವೂ ಇದೀಗ ಭಾರೀ ಸಂಚಲನವನ್ನು ಸೃಷ್ಟಿ ಮಾಡಿದೆ.
ಹೌದು... ಎಪ್ರಿಲ್ 21ರಂದು ನಗರದ ಹೊರವಲಯದ ಮಳಲಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯನ್ನು ನವೀಕರಣ ಹಿನ್ನೆಲೆಯಲ್ಲಿ ಕೆಡವಿ ಹಾಕಲಾಗಿತ್ತು. ಆಗ ಮಸೀದಿಯೊಳಗಡೆ ಹಿಂದೂ ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ, ತಹಶೀಲ್ದಾರ್ ಮೂಲಕ ಒಂದು ವಾರದವರೆಗೆ ಮಸೀದಿಯ ನವೀಕರಣ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಈ ನಡುವೆ ವಿಎಚ್ ಪಿ ಮಸೀದಿಗೆ ಭೇಟಿ ಪರಿಶೀಲನೆ ನಡೆಸಿ ಕೋರ್ಟ್ ಮೂಲಕ ಮಸೀದಿ ನವೀಕರಣ ಕಾರ್ಯಕ್ಕೆ ಸಂಪೂರ್ಣ ತಡೆ ತಂದಿದೆ. ಈಗಲೂ ಈ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
ಮಸೀದಿಯೊಳಗಡೆ ದೇವಾಲಯ ಶೈಲಿಯ ಕಟ್ಟಡ ಪತ್ತೆಯ ವಿವಾದವೀಗ ಕೋರ್ಟ್ ನಲ್ಲಿದ್ದು, ಕಾನೂನು ಮೂಲಕ ವಿವಾದವನ್ನು ಬಗೆಹರಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ವಿಎಚ್ ಪಿಗೆ ಮಾತ್ರ ಇದು ತೃಪ್ತಿಯಾದಂತಿಲ್ಲ. ಆದ್ದರಿಂದ ನ್ಯಾಯಾಲಯದ ವಿಚಾರಣೆಯ ನಡುವೆಯೇ ಮಸೀದಿಯಲ್ಲಿ ದೈವಸಾನಿಧ್ಯವಿತ್ತೇ ಎಂಬ ಬಗ್ಗೆ ಉತ್ತರ ಕಂಡುಕೊಳ್ಳಲು ತಾಂಬೂಲ ಪ್ರಶ್ನೆ ಇಡುವ ಚಿಂತನೆ ನಡೆಸಿತ್ತು. ಅದಕ್ಕಾಗಿ ಕೇರಳದಿಂದ ಪೊದುವಾಳ್ ರನ್ನು ಕರೆತಂದು ಪ್ರಶ್ನಾಚಿಂತನೆ ಇರಿಸುವ ಬಗ್ಗೆ ಗಂಭೀರ ಪ್ರಯತ್ನ ಮಾಡಿದೆ.
ಈ ಹಿನ್ನೆಲೆಯಲ್ಲಿ ಇಂದು ಮಳಲಿಯಲ್ಲಿರುವ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ವಿಎಚ್ ಪಿ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾಚಿಂತನೆ ನಡೆಸಲಾಗಿದೆ. ಕೇರಳದ ಪ್ರಖ್ಯಾತ ಜೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಇಂದು ತಾಂಬೂಲ ಪ್ರಶ್ನಾಚಿಂತನೆ ನಡೆಸಲಾಗಿದೆ. ತಾಂಬೂಲ ಪ್ರಶ್ನೆಯಲ್ಲಿ ಈ ಮಸೀದಿಯಿದ್ದ ಸ್ಥಳದಲ್ಲಿ ಹಿಂದೆ ಗುರು ಮಠವಿತ್ತು ಎಂಬುದು ಗೋಚರವಾಗಿದೆ. ಆಗ ಶೈವ ಆರಾಧನೆಯು ಅಲ್ಲಿ ನಡೆಯುತ್ತಿತ್ತು ಎಂಬ ವಿಚಾರ ಸ್ಪಷ್ಟವಾಗಿ ತಿಳಿದು ಬಂದಿದೆ.
9 ವೀಳ್ಯದೆಲೆಯಲ್ಲಿ ಪೊದುವಾಳ್ ಅವರು ತಾಂಬೂಲ ಪ್ರಶ್ನಾಚಿಂತನೆ ನಡೆಸಿದ್ದಾರೆ. ಅವರು ಮೊದಲು ಎತ್ತಿದ ವೀಳ್ಯದೆಲೆಯೇ ಕೆಟ್ಟುಹೋಗಿದ್ದು, ಇಲ್ಲಿನ ದೈವಸಾನಿಧ್ಯ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಎರಡನೆಯ ವೀಳ್ಯ ಶುದ್ಧವಾಗಿದ್ದು, ಇದು ಆ ಸ್ಥಳವನ್ನು ಶುದ್ಧೀಕರಿಸಲು ಸಮಾಜ ಹೊರಟಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಮೂರನೇ ಎಲೆಯೂ ಶುದ್ಧವಾಗಿದ್ದು, ಇದು ಈ ವಿವಾದವು ಯಾವುದೇ ಗೊಂದಲ, ಗಲಾಟೆ, ಸಂಘರ್ಷಗಳಿಲ್ಲದೆ ನೆರವೇರುತ್ತದೆ ಎಂದು ತಿಳಿಸುತ್ತದೆ.
4ನೇಯದ್ದು ಶುದ್ಧಎಲೆ 5ನೇ ಎಲೆಯ ತೊಟ್ಟಿನ ಭಾಗ ಕೆಟ್ಟಿದ್ದು ಈ ಜಾಗದಲ್ಲಿ ಜಲಮೂಲವೊಂದು ಇದ್ದು ಅದೀಗ ಸಂಪೂರ್ಣ ನಾಶವಾಗಿರುವುದು ಗೋಚರವಾಗಿದೆ. 6,7,8 ಎಲೆಗಳು ಸಾಧಾರಣ ಗಾತ್ರದ ಆಯಕಟ್ಟಿನ ಎಲೆಗಳು. 9ನೇ ಎಲೆ ಬಹಳ ಉತ್ತಮವಾಗಿದ್ದು, ಅದಕ್ಕಿಂತ ಚೆನ್ನಾಗಿರುವ ಎಲೆ ಮತ್ತೊಂದಿಲ್ಲ ಆದ್ದರಿಂದ ಈ ಸ್ಥಳ ಜೀರ್ಣೋದ್ಧಾರವಾದಲ್ಲಿ ಇಡೀ ಗ್ರಾಮಕ್ಕೆ ಒಳಿತಾಗಲಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಗೋಚರವಾಗಿದೆ.
ಈ ಹಿಂದಿನ ದೈವ ಸಾನಿಧ್ಯವು ವ್ಯಾಜ್ಯವೊಂದರ ಹಿನ್ನೆಲೆಯಲ್ಲಿ ಸಂಪೂರ್ಣ ನಾಶವಾಗಿದೆ. ಆದ್ದರಿಂದ ಇಲ್ಲಿ ಹಿಂದೆ ಇದ್ದವರು ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಆರಾಧನೆಯಾಗುತ್ತಿದ್ದ ದೈವ ಸಾನಿಧ್ಯವು ಇನ್ನೆಲ್ಲೋ ಆರಾಧನೆಗೊಳ್ಳುತ್ತಿದೆ. ಆದರೆ ಇಲ್ಲಿಂದ ದೈವ ಸಾನಿಧ್ಯವು ಸಂಪೂರ್ಣವಾಗಿ ಹೋಗಿಲ್ಲ. ಅರ್ಧದಷ್ಟು ದೈವಸಾನಿಧ್ಯವು ಮಸೀದಿಯಿರುವ ಪ್ರದೇಶದಲ್ಲಿಯೇ ಇದೆ. ಆದರೆ ಅದು ಎಲ್ಲಿದೆ, ಯಾವ ಮೂಲೆಯಲ್ಲಿದೆ ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಷ್ಟೇ ಗೋಚರವಾಗಬೇಕು. ಇನ್ನೆಲ್ಲೋ ಆರಾಧನೆಗೊಳ್ಳುತ್ತಿರುವ ಇಲ್ಲಿನ ದೈವಸಾನಿಧ್ಯದ ಹಿನ್ನೆಲೆಯಲ್ಲಿ ಮಸೀದಿಯ ಸ್ಥಳದಲ್ಲಿರುವ ದೈವ ಸಾನಿಧ್ಯಕ್ಕೆ ಈಗಲೂ ಚೈತನ್ಯ ಶಕ್ತಿಯಿದೆ. ಆದ್ದರಿಂದ ಅದು ಇದೀಗ ಗೋಚರಗೊಂಡಿದೆ ಎಂದು ಪ್ರಶ್ನಾಚಿಂತನೆಯಲ್ಲಿ ಸ್ಪಷ್ಟವಾಗಿದೆ.
ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹದ್ದೊಂದು ವ್ಯಾಜ್ಯ ತಲೆದೋರಿದೆ. ತಾಂಬೂಲ ಪ್ರಶ್ನೆಯೊಂದು ಮೊದಲ ಬಾರಿಗೆ ಈ ಮಟ್ಟಿಗೆ ಸುದ್ದಿಯಾಗಿದೆ. ತಾಂಬೂಲ ಪ್ರಶ್ನಾಚಿಂತನೆಯ ವಿಚಾರದಲ್ಲಿ ಈಗಾಗಲೇ ಪ್ರತಿಪಕ್ಷದ ನಾಯಕರು ಕಿಡಿಕಾರುತ್ತಿದ್ದಾರೆ. ಆದರೆ ಮಸೀದಿಯ ಆಡಳಿತ ಸಮಿತಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ವಿಎಚ್ ಪಿ ತಾಂಬೂಲ ಪ್ರಶ್ನೆಯಲ್ಲಿಯೇ ತೃಪ್ತಹೊಂದದೆ ದೈವಸಾನಿಧ್ಯದ ಬಗ್ಗೆ ಇನ್ನಷ್ಟು ಶೋಧ ನಡೆಸಲು ಅಷ್ಟಮಂಗಲ ಪ್ರಶ್ನೆಯನ್ನಿರಿಸುವ ಚಿಂತನೆ ನಡೆಸಿದೆ. ಆದರೆ ಕೋರ್ಟ್ ನಲ್ಲಿರುವ ಈ ವಿವಾದ ಹಾಗೂ ಧಾರ್ಮಿಕ ನಂಬಿಕೆ ಈ ಎರಡರ ನಡುವೆ ಯಾವುದಕ್ಕೆ ಮಾನ್ಯತೆ ದೊರಕಲಿದೆ ಎಂಬ ಕುತೂಹಲ ಎಲ್ಲರಲ್ಲೂ ಗರಿಗೆದರಿದೆ.