ಮೂಡುಬಿದಿರೆ: 9ರ ಬಾಲೆಯಿಂದ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ
Wednesday, May 4, 2022
ಮೂಡುಬಿದಿರೆ: 9ರ ಪುಟ್ಟ ಬಾಲೆಯೋರ್ವಳು ಕ್ಯಾನ್ಸರ್ ಪೀಡಿತರಿಗಾಗಿ ತನ್ನ ನೀಳವಾದ ಕೇಶವನ್ನೇ ದಾನ ಮಾಡಿದ್ದಾಳೆ.
ಹೌದು ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ನಿವಾಸಿ ತಾನಿಯಾ ಎಂಬ 9ರ ಬಾಲೆ ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶವನ್ನೇ ದಾನ ಮಾಡಿ ಮಾನವೀಯತೆ ಮೆರೆದ ಬಾಲೆ. ಈಕೆ ತನ್ನ ನೀಳವಾದ ಕೂದಲಿನ 16 ಇಂಚಿನಷ್ಟು ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಪಡುಮಾರ್ನಾಡಿನ ಸೇವಾ ಮಾಣಿಕ್ಯವೆಂದು ಬಿರುದು ಪಡೆದಿರುವ ಲೋಹಿತ್ ಎಸ್ ಹಾಗೂ ಟೆಸ್ಲಿನಾ ದಂಪತಿಯ ಪುತ್ರಿಯಾದ ತಾನಿಯ ಎಸ್. ಅವರು ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರ ಕ್ಯಾನ್ಸರ್ ಪೀಡಿತರಿಗಾಗಿ ನಿರ್ಮಿಸಿರುವ ಕೇಶ ದಾನ ಮಹಾಯೋಜನೆಗೆ ತನ್ನ ಕೂದಲನ್ನು ದಾನ ಮಾಡಿದ್ದಾಳೆ.
ಇತ್ತೀಚೆಗಷ್ಟೇ ತಾನಿಯಾ ಚಿಕ್ಕಮ್ಮ ಕ್ಯಾರಲ್ ಅವರು ಕೂಡಾ ಕ್ಯಾನ್ಸರ್ ಪೀತರಿಗೆ ತಮ್ಮ ಕೂದಲನ್ನು ದಾನ ಮಾಡಿದ್ದರು. ಇದರಿಂದ ಪ್ರೇರಣೆಗೊಂಡ ತಾನಿಯಾ ಈ ನಿರ್ಧಾರ ಕೈಗೊಂಡಿದ್ದಾರೆ. ಚಿಕ್ಕಮ್ಮ ಕ್ಯಾನ್ಸರ್ ಪೀಡಿತರ ಬಗ್ಗೆ ನೀಡಿರುವ ಮಾಹಿತಿಯಂತೆ ತಾನೂ ತನ್ನ ಕೂದಲನ್ನು ದಾನ ಮಾಡುವುದಾಗಿ ತಿಳಿಸಿದ್ದಾಳೆ. ಪುತ್ರಿಯ ಮಾನವೀಯ ಕಾಳಜಿಗೆ ಪೋಷಕರು ಸಮ್ಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ತಾನಿಯಾ ತನ್ನ ಕೇಶವನ್ನು ದಾನ ಮಾಡಿದ್ದಾಳೆ.