ಧಾರವಾಡ: ರಸ್ತೆ ಅಪಘಾತಕ್ಕೆ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ದುರ್ಮರಣ
Saturday, May 21, 2022
ಧಾರವಾಡ: ಕ್ರೂಸರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅನನ್ಯಾ (14), ಹರೀಶ್ (13) ಶಿಲ್ಪಾ (34) ನೀಲವ್ವ (60) ಮಧುಶ್ರೀ (20) ಮಹೇಶ್ವರಯ್ಯ (11), ಶಂಭುಲಿಂಗಯ್ಯ (35) ಅಪಘಾತಕ್ಕೆ ಬಲಿಯಾದ ದುರ್ದೈವಿಗಳು.
ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿಸಿ ಮನಸೂರ ಗ್ರಾಮದಿಂದ ಬೆನಕನಕಟ್ಟಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕ್ರೂಸರ್ ವಾಹನದಲ್ಲಿ ಸುಮಾರು 21 ಮಂದಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ವಾಹನವು ಮರಕ್ಕೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.