ಕೇಂದ್ರ ಗೃಹ ಸಚಿವರಿಗೆ ಕರ್ಕಶ ಹಾರ್ನ್ ಬಿಸಿ: ಅಮಿತ್ ಶಾಗೆ ಝೀರೋ ಟ್ರಾಫಿಕ್: ಸಾರ್ವಜನಿಕರು ಕಿಡಿಕಿಡಿ
ಕೇಂದ್ರ ಗೃಹ ಸಚಿವರಿಗೆ ಕರ್ಕಶ ಹಾರ್ನ್ ಬಿಸಿ: ಅಮಿತ್ ಶಾಗೆ ಝೀರೋ ಟ್ರಾಫಿಕ್: ಸಾರ್ವಜನಿಕರು ಕಿಡಿಕಿಡಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್ ಮಾಡಲಾಗಿದ್ದು, ಇದರಿಂದಾಗಿ ಬೆಂಗಳೂರಿನ ವಿವಿಧೆಡೆಗಳಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಚಾಲಕರು ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.
ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಾಗಿರುವ ರೇಸ್ ಕೋರ್ಸ್ ರಸ್ತೆಯ ಸಿಗ್ನಲ್ ಬಳಿಯಲ್ಲಿ ಪೊಲೀಸರು ಹಾಗೂ ವಾಹನ ಸವಾರರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಸಂಚಾರಕ್ಕೆ ರಸ್ತೆ ಮುಕ್ತವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದ ವಾಹನ ಚಾಲಕರು ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಹಾರ್ನ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಬೇಕು. ಈ ರೀತಿ ರಸ್ತೆ ಬಂದ್ ಮಾಡಿದ್ರೆ, ನಾವು ಹೇಗೆ ಹೋಗೋದು? ನಮ್ಮ ಕೆಲಸ ಹೋದರೆ ಅವರು ನಮಗೆ ಕೆಲಸ ಕೊಡಿಸ್ತಾರಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿರುವುದು ಕಂಡು ಬಂತು.
ಭೇಟಿಯ ಸಂದರ್ಭದಲ್ಲಿ ರಸ್ತೆ ಸಂಚಾರ ತಡೆಗಟ್ಟಿದ ಹಲವೆಡೆ ವಾಹನ ಸವಾರರು ತಾಳ್ಮೆ ಕಳೆದುಕೊಂಡು ಶಾರ್ಟ್ ಕಟ್ ರಸ್ತೆಗಳಲ್ಲಿ ಪ್ರಯಾಣಿಸಲು ಪ್ರಯತ್ನಿಸಿದರು. ಆದರೆ ಪೊಲೀಸರು ಅಲ್ಲೂ ಪ್ರತ್ಯಕ್ಷರಾಗಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಆಕ್ರೋಶಗೊಂಡು, ಒಂದು ಗಂಟೆಯಿಂದ ಕಾಯುತ್ತಿದ್ದೇವೆ ರೀ… ಎಷ್ಟು ಹೊತ್ತು ನಾವು ಕಾಯ್ಬೇಕು? ಇಲ್ಲಿಯೂ ನಮ್ಮನ್ನು ಅಡ್ಡ ಹಾಕುತ್ತೀರಾ..? ಎಂದು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.