ಕೋವಿಡ್ ಗೆ ಪುತ್ರ ಬಲಿ: ಸೊಸೆಗೆ ಮತ್ತೊಂದು ಮದುವೆ ಮಾಡಿಸಿ ಲಕ್ಷಾಂತರ ರೂ. ಬಂಗಲೆ ಉಡುಗೊರೆಯಾಗಿ ನೀಡಿದ ಅತ್ತೆ!
Saturday, May 14, 2022
ಧಾರ್(ಮಧ್ಯಪ್ರದೇಶ) : ಪತಿಯ ಮನೆಯವರ ಕಿರುಕುಳದಿಂದ ಎಷ್ಟೋ ಮಂದಿ ವಿವಾಹಿತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ, ತವರು ಮನೆ ಸೇರಿರುವ ನೂರಾರು ಪ್ರಕರಣಗಳು ನಮ್ಮ ಕಣ್ಮುಂದೆ ಇವೆ. ಆದರೆ, ಮಧ್ಯಪ್ರದೇಶದಲ್ಲೊಂದು ವಿಭಿನ್ನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಕೋವಿಡ್ನಿಂದಾಗಿ ಪುತ್ರ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಅತ್ತೆಯೇ ಮುಂದೆ ನಿಂತು ಸೊಸೆಗೆ ಬೇರೊಂದು ಮದುವೆ ಮಾಡಿಸಿರುವ ಘಟನೆ ನಡೆದಿದೆ. ಅಲ್ಲದೆ ಲಕ್ಷಾಂತರ ರೂ. ಮೌಲ್ಯದ ಬಂಗಲೆಯನ್ನೂ ಉಡುಗೊರೆಯಾಗಿ ನೀಡಿದ್ದಾರೆ.
ಮಧ್ಯಪ್ರದೇಶದ ಧಾರ್ ಎಂಬಲ್ಲಿ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ಸೊಸೆಯನ್ನು ಆಕೆಯ ಪತಿಯ ಮನೆಗೆ ಕಳುಹಿಸುವ ಸಂದರ್ಭ ಅತ್ತೆ ಕಣ್ಣೀರು ಹಾಕಿರುವ ಘಟನೆ ಸಹ ನಡೆದಿದೆ. ಧಾರ್ ನಿವಾಸಿ ಪ್ರಿಯಾಂಕ್ ತಿವಾರಿ 2021ರಲ್ಲಿ ರಿಚಾ ಎಂಬಕೆಯೊಂದಿಗೆ ಮದುವೆಯಾಗಿದ್ದನು. ಆದರೆ ಕಳೆದ ಎಪ್ರಿಲ್ ನಲ್ಲಿ ಪ್ರಿಯಾಂಕ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಕೋವಿಡ್ನಿಂದ ಮೃತಪಟ್ಟಿದ್ದಾನೆ.
ಆ ಬಳಿಕ ರಿಚಾ ತಮ್ಮ ಪುತ್ರಿಯೊಂದಿಗೆ ಅತ್ತೆ ಮನೆಯಲ್ಲೇ ಇದ್ದರು. ಈ ಮಧ್ಯೆ ರಿಚಾ ಅವರ ಮಾವ ಯುಗ್ ತಿವಾರಿ ಸೊಸೆಗಾಗಿ ನೂತನ ಮನೆಯೊಂದನ್ನು ನಿರ್ಮಿಸಿದ್ದರು. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ವಾಸವಾಗಿರುವ ಅರುಣ್ ಮಿಶ್ರಾ ಅವರೊಂದಿಗೆ ಸೊಸೆ ರಿಚಾ ಮದುವೆ ಮಾಡಿಸಿ, ಆಕೆಗೋಸ್ಕರ ನಿರ್ಮಾಣ ಮಾಡಿದ ಹೊಸ ಮನೆ ಉಡುಗೊರೆಯಾಗಿ ನೀಡಿದ್ದಾರೆ.
ರಿಚಾ ಬೇರೊಂದು ಮನೆಗೆ ಹೋಗುವಾಗ ತಿವಾರಿ ಕುಟುಂಬದ ಸದಸ್ಯರ ಕಣ್ಣು ತೇವಗೊಂಡವು. ಈ ವೇಳೆ ಅತ್ತೆ ರಾಗಿಣಿ ಅನೇಕ ಸಲ ಸೊಸೆಯನ್ನು ತಬ್ಬಿಕೊಂಡು ಕಣ್ಣೀರು ಸಹ ಹಾಕಿದ್ದಾರೆ. ಅಕ್ಷಯ ತೃತೀಯದಂದು ಈ ಮದುವೆ ಕಾರ್ಯಕ್ರಮ ನಡೆದಿದೆ.