ಮಂಗಳೂರು: ವಿದೇಶಕ್ಕೆ ಹೋಗುತ್ತಿದ್ದವರ ದರೋಡೆಗೈದ ಮೂವರು ಆರೋಪಿಗಳು ಅರೆಸ್ಟ್
Tuesday, May 24, 2022
ಮಂಗಳೂರು: ವಿದೇಶಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹಲ್ಲೆಗೈದು ದರೋಡೆ ಮಾಡಿರುವ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಉಪ್ಪಿನಂಗಡಿ ನಿವಾಸಿಗಳಾದ ನೌರೀಝ್(30), ನೌಶಾದ್(32) ಹಾಗೂ ಅಕ್ಬರ್(40) ಬಂಧಿತ ಆರೋಪಿಗಳು.
ನಗರದ ನಾರ್ಲಪದವು ನಿವಾಸಿ ಅಬ್ದುಲ್ ರೆಹಮಾನ್(62) ಎಂಬವರು ಮೇ 23ರಂದು ಬೆಳ್ಳಂಬೆಳಗ್ಗೆ 4.30 ಗಂಟೆಗೆ ಮಸ್ಕತ್ ಗೆಂದು ಹೊರಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆಂದು ಕಾರಿನಲ್ಲಿ ತೆರಳುತ್ತಿದ್ದರು. ಅವರು ಕಂದಾವರ ತಲುಪುತ್ತಿದ್ದಂತೆ ಐವರು ಸ್ವಿಫ್ಟ್ ಕಾರಿನಲ್ಲಿ ಬಂದು ಇವರು ಚಲಿಸುತ್ತಿದ್ದ ಓಮ್ನಿ ಕಾರಿಗೆ ಅಡ್ಡ ಬಂದಿದ್ದಾರೆ.
ಬಳಿಕ ಅಬ್ದುಲ್ ರೆಹಮಾನ್ ಅವರನ್ನು ಹೊರಕ್ಕೆಳೆದು ಚೂರಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಅವರ ಪಾಸ್ ಪೋರ್ಟ್, ಹಣ, ಮೊಬೈಲ್ ಇರುವ ಸೂಟ್ ಕೇಸ್ ಅನ್ನೇ ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 10ಗಂಟೆಯ ಅವಧಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿರುವ ಕಾರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.