ಪತಿಯ ಆದಾಯ ಕಡಿಮೆಯೆಂದು ಪತ್ನಿ ಮಾಡಿದ ಕೃತ್ಯವೇನು ಗೊತ್ತೇ?
Tuesday, May 3, 2022
ಜೈಪುರ: ಪತಿಯಲ್ಲಿ ಹಣವಿಲ್ಲವೆಂದು ಪತ್ನಿ ಮಾಡಿರುವ ಕೆಲಸ ಯಾರನ್ನಾದರೂ ಬೆಚ್ಚಿ ಬೀಳಿಸುತ್ತದೆ. ಆಕೆ ತನ್ನ ಸೌಂದರ್ಯವನ್ನೇ ಬಳಸಿಕೊಂಡು ಹಿಡಿದಿರುವ ಅಡ್ಡದಾರಿಯಿಂದ ಇದೀಗ ಆಕೆ ಕಂಬಿ ಎಣಿಸುವಂತಾಗಿದೆ.
ಮೂರು ವರ್ಷಗಳ ಹಿಂದೆ ಈಕೆಗೆ ವಿಕ್ರಮ್ ಸಿಂಗ್ ಎಂಬಾತನೊಂದಿಗೆ ವಿವಾಹವಾಗಿತ್ತು. ಇದ್ದುದರಲ್ಲೇ ಸುಖ ಸಂಸಾರ ಮಾಡಿಕೊಂಡು ಬದುಕುತ್ತಿದ್ದ 25 ವರ್ಷದ ಈ ಯುವತಿಗೆ ಪತಿಯ ಆದಾಯ ತೃಪ್ತಿ ತರಲಿಲ್ಲ. ಪತಿ ಶ್ರೀಮಂತನಲ್ಲದಿದ್ದರಿಂದ ಏನಾದರೂ ಮಾಡಿ ದುಡ್ಡು ಗಳಿಸಬೇಕೆಂಬ ಕೆಟ್ಟ ಆಲೋಚನೆಗೆ ಇಳಿಯುತ್ತಾಳೆ. ಇದಕ್ಕೆ ಆಕೆ ಕಂಡುಕೊಂಡ ಮಾರ್ಗ ಮಾತ್ರ ಆಕೆಯ ಜೀವನವನ್ನೇ ಕತ್ತಲೆಯ ಕೂಪಕ್ಕೆ ತಳ್ಳಿದೆ.
ಪತಿ ವಿಕ್ರಮ್ ಸಿಂಗ್ ಕೆಲಸ ಮಾಡುವ ಮಾರ್ಬಲ್ ಕಂಪನಿಯಲ್ಲೇ ಕೆಲಸಕ್ಕಿದ್ದ ಆತನ ಸ್ನೇಹಿತ ಶೈತಾನ್ ಸಿಂಗ್ ಎಂಬಾತನ ಪರಿಚಯ ಈಕೆಗಾಗಿದೆ. ಆತನ ಜತೆ ಸೇರಿದ ಈ ಮಾಯಾಂಗನೆ ಮಾರ್ಬಲ್ ವ್ಯಾಪಾರಿಯ ಸಂಪರ್ಕ ಪಡೆಯುತ್ತಾಳೆ. ಇಬ್ಬರೂ ಪರಸ್ಪರ ಪರಿಚಿತರಾಗುತ್ತಾರೆ. ಇಬ್ಬರ ನಡುವೆ ಸಲುಗೆಯೂ ಬೆಳೆಯುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ಯುವತಿ ಆತನೊಂದಿಗಿದ್ದ ಸಂದರ್ಭದ ಅಶ್ಲೀಲ ವೀಡಿಯೋವನ್ನು ಚಿತ್ರೀಕರಣ ಮಾಡುತ್ತಾಳೆ. ಆ ವೀಡಿಯೋವನ್ನೇ ತೋರಿಸಿ ಆಗ್ಗಾಗ್ಗೇ ಬ್ಲಾಕ್ ಮೇಲ್ ಮಾಡಿ ಈವರೆಗೆ 23 ಲಕ್ಷ ರೂ.ಗಳನ್ನು ಕಸಿದುಕೊಂಡಿರುತ್ತಾರೆ.
ಇದರಿಂದ ಮಾರ್ಬಲ್ ವ್ಯಾಪಾರಿ ಸಾಕಷ್ಟು ಕಿರುಕುಳ ಅನುಭವಿಸಿದ್ದನು. ಇನ್ನು ತನ್ನ ಬಳಿ ಹಣವಿಲ್ಲವೆಂದು ಆತ ಮನೆಯನ್ನೂ ತೊರೆದಿದ್ದನು. ಈ ಹಿನ್ನೆಲೆಯಲ್ಲಿ ಆತನ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸರು ಆತನ ಪತ್ತೆ ಹಚ್ಚುತ್ತಾರೆ. ಈ ಸಂದರ್ಭ ಆತ 'ತಾನು ಆತ್ಮಹತ್ಯೆಗೆ ಶರಣಾಗಲು ತಾನು ಮನೆ ಬಿಟ್ಟಿರುವುದಾಗಿ' ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಪರಿಣಾಮ ಯುವತಿಯ ಕೃತ್ಯ ಬಯಲಾಗಿದೆ. ಸದ್ಯ ಯುವತಿ ಸೇರಿ ಮೂವರನ್ನು ಬಂಧಿಸಲಾಗಿದ್ದು, ಒಟ್ಟು 23 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.