ಮಂಗಳೂರು: ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ ಇಬ್ಬರು ಎಸ್ ಡಿಪಿಐ ಕಾರ್ಯಕರ್ತರು ಸೇರಿ ಆರು ಮಂದಿ ಅರೆಸ್ಟ್
Tuesday, May 31, 2022
ಮಂಗಳೂರು: ನಗರದ ಕಣ್ಣೂರಿನಲ್ಲಿ ನಡೆದಿರುವ ಎಸ್ ಡಿಪಿಐ ಸಮಾವೇಶಕ್ಕೆ ತೆರಳುತ್ತಿರುವವರು ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿರುವ ಇಬ್ಬರು ಆರೋಪಿಗಳು ಸೇರಿದಂತೆ ಅವರನ್ನು ರಕ್ಷಿಸಲು ಆಶ್ರಯ ನೀಡಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಇನೋಳಿ ನಿವಾಸಿಗಳಾದ ನೌಷಾದ್(28), ಹೈದರಾಲಿ(27), ಜುಬೇರ್(32), ಪಾಂಡೇಶ್ವರದ ಮೊಹರಮ್ ಸಯ್ಯದ್ ಅಫ್ರೀದ್(23), ಕೊಣಾಜೆಯ ಬಶೀರ್(40), ಪುತ್ತೂರಿನ ಜಲೀಲ್(25) ಬಂಧಿತ ಆರೋಪಿಗಳು.
ನಗರದ ಕಣ್ಣೂರಿನಲ್ಲಿ ಶುಕ್ರವಾರ ಎಸ್ ಡಿಪಿಐ ಜನಾಧಿಕಾರ ಸಮಾವೇಶ ನಡೆದಿತ್ತು. ಇದರಲ್ಲಿ ಭಾಗವಹಿಸಲು ಭಾಗವಹಿಸಲು ಆರೋಪಿಗಳಾದ ನೌಷಾದ್, ಹೈದರಾಲಿ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು ಎಸ್ ಡಿಪಿಐ ಪಕ್ಷದ ಧ್ವಜವನ್ನು ಹಿಡಿದುಕೊಂಡು ಪೊಲೀಸರ ವಿರುದ್ಧ ಅವಾಚ್ಯವಾಗಿ ನಿಂದಿಸಿ ಘೋಷಣೆ ಕೂಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು. ಈ ವಿಚಾರ ಆರೋಪಿಗಳಿಗೆ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬಸ್ಥರು, ಹಿತೈಷಿಗಳಿಗೆ, ಎಸ್ ಡಿಪಿಐ ಪಕ್ಷದ ಮುಖಂಡರಲ್ಲಿಯೂ ಚರ್ಚಿಸಿದ್ದರು. ಆದರೆ ಎಲ್ಲರೂ ಪ್ರಕರಣದಲ್ಲಿ ಜಾಮೀನು ದೊರಕುವವರೆಗೆ ತಲೆಮರೆಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಆದ್ದರಿಂದ ಆರೋಪಿಗಳಾದ ನೌಷಾದ್ ಹಾಗೂ ಹೈದರಾಲಿ ತಾವು ಕೆಲಸ ಮಾಡುತ್ತಿದ್ದ ಬೆಂಗಳೂರು ಮತ್ತು ಮೈಸೂರಿಗೆ ತೆರಳಿ ಅಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರು ಇವರ ಅಡಗುದಾಣವನ್ನು ಪತ್ತೆಹಚ್ಚಿ ದಾಳಿ ನಡೆಸಿದ್ದಾರೆ. ಆಗ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಆರೋಪಿ ನೌಷಾದ್ ನ ರಕ್ಷಣೆ ಮಾಡಲು ಮನೆಯಲ್ಲಿದ್ದ ಮೂವರು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಮೂಲದ ಮಹಮ್ಮದ್ ಯಾಸೀನ್(25), ಅಫ್ರೀದ್ ಸಾಗ್(19), ಮಹಮ್ಮದ್ ತುಫೇಲ್(19) ಎಂಬವರನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಯತ್ನಿಸಿರುವ 11 ಮಂದಿಯನ್ನು ಬಂಧನ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.