ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ವಯೋವೃದ್ಧರೋರ್ವರ ಭೂಮಿ ಕಬಲಿಸಲು ಯತ್ನಿಸಿದ ನಯವಂಚಕರಿಬ್ಬರು ಅರೆಸ್ಟ್
Saturday, May 7, 2022
ಮಂಗಳೂರು: ಇವರು ಅಂತಿಥ ವಂಚಕರಲ್ಲ. ಈ ಖತರ್ನಾಕ್ ಖದೀಮರು 84 ವಯಸ್ಸಿನ ವಯೋವೃದ್ಧರೊಬ್ಬರ ಭೂಮಿಯನ್ನು ಕಬಳಿಸಲು ಯತ್ನಿಸಲು ಹೋಗಿ ಇದೀಗ ಪೊಲೀಸ್ ಕಂಬಿ ಎಣಿಸುತ್ತಿದ್ದಾರೆ.
ಬೆಂಗಳೂರು ಮೂಲದ ಸದ್ಯ ಬಜ್ಪೆ ಬಳಿಯ ಕೊಂಪದವು ನಿವಾಸಿ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ (84) ವಂಚನೆಗೊಳಾದ ವೃದ್ಧ. ಇವರಿಗೆ ಉಡುಪಿಯ ಮೂಡುತೋನ್ಸೆಯ ಬಳಿ 77 ಸೆಂಟ್ಸ್ ಭೂಮಿಯಿದೆ. ಅವರು ಈ ಭೂಮಿಯನ್ನು ಮಾರಲು ಬಯಸಿದ್ದರು. ಇದು ಆ ವೃದ್ಧರ ಪರಿಚಯದ ರಾಮ ಪೂಜಾರಿಗೆ ತಿಳಿದಿತ್ತು. ಆತ ಅಶೋಕ್ ಕುಮಾರ್ ಹಾಗೂ ರೇಷ್ಮಾ ವಾಸುದೇವ ನಾಯಕ್ ಎಂಬಿಬ್ಬರನ್ನು ಕರೆತಂದು ಇವರು ಭೂಮಿ ಖರೀದಿಸಲು ಆಸಕ್ತರಾಗಿದ್ದಾರೆಂದು ಹೇಳಿ ವ್ಯವಹಾರ ಕುದುರಿಸಿದ್ದಾನೆ.
ಈ ಬಗ್ಗೆ ಕರಾರು ಪತ್ರವನ್ನೂ ಮಾಡಲಾಗಿತ್ತು. ಈ ಸಂದರ್ಭ ಮುಂಗಡವಾಗಿ ಚೆಕ್ ಮೂಲಕ 30 ಲಕ್ಷ ರೂ. ನೀಡಿದ್ದರು. ಉಳಿದ ಹಣವನ್ನು ಆರು ತಿಂಗಳ ಒಳಗೆ ಕೊಟ್ಟು ಕ್ರಯಪತ್ರ ಮಾಡುವುದಾಗಿ ತಿಳಿಸಿದ್ದರು. ಆದರೆ ಆರೋಪಿಗಳು ವೃದ್ಧ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ ಅವರಿಗೆ ವಂಚಿಸಿ ಎಲ್ಲಾ 77 ಸೆಂಟ್ಸ್ ಗೆ ನಕಲಿ ದಾಖಲೆಪತ್ರ ನೀಡಿ ಕ್ರಯಪತ್ರ ಮಾಡಿಸಿದ್ದರು. ಅಲ್ಲದೆ 30 ಲಕ್ಷ ರೂ. ಚೆಕ್ ಕೂಡಾ ಬೌನ್ಸ್ ಆಗಿದೆಯೆಂದು ಸಂತ್ರಸ್ತ ವೃದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಹಾಕಿ ವಂಚಿಸಿ 77 ಸೆಂಟ್ಸ್ ಭೂಮಿಯನ್ನು ಕಬಳಿಸಲು ಯತ್ನಿಸಿದ್ದ ಆರೋಪದಲ್ಲಿ ಉಡುಪಿಯ ಅಶೋಕ್ ಕುಮಾರ್ ಹಾಗೂ ರೇಷ್ಮಾ ವಾಸುದೇವ ನಾಯಕ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಮ ಪೂಜಾರಿಯ ಬಂಧನ ಇನ್ನಷ್ಟೇ ಆಗಬೇಕಿದೆ.