ಹಿಗ್ಗಾಮುಗ್ಗಾ ಥಳಿಸುವ ಪತ್ನಿಯಿಂದ ಪಾರು ಮಾಡಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ ಪ್ರಾಂಶುಪಾಲ
Friday, May 27, 2022
ಮಂಗಳೂರು: ತನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸುತ್ತಿದ್ದಾಳೆ. ಈ ಸಂಕಷ್ಟದಿಂದೊಮ್ಮೆ ಪಾರು ಮಾಡಿ ಎಂದು ವೀಡಿಯೋ ದಾಖಲೆ ಸಹಿತ ಶಾಲಾ ಪ್ರಾಂಶುಪಾಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜಸ್ತಾನದ ಅಲ್ವಾರ್ ಪ್ರದೇಶದ ನಿವಾಸಿ, ಪ್ರಾಂಶುಪಾಲ ಅಜಿತ್ ಯಾದವ್ ಪತ್ನಿಯ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದವರು. ಇವರು ತಮ್ಮ ಪತ್ನಿ ತಮ್ಮನ್ನು ಹಿಗ್ಗಾಮುಗ್ಗಾ ಥಳಿಸುವ ವೀಡಿಯೋ ಸಹಿತ ದೂರು ದಾಖಲಿಸಿದ್ದಾರೆ. ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ಅವರ ಮನವಿಗೆ ಸ್ಪಂದನೆ ನೀಡಿ ರಕ್ಷಣೆ ಕೊಡುವ ಭರವಸೆ ನೀಡಿದೆ.
ಅಜಿತ್ ಹರಿಯಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 7 ವರ್ಷದ ಹಿಂದೆ ವಿವಾಹವಾಗಿರುವ ಅವರಿಗೆ 6ವರ್ಷದ ಪುತ್ರನಿದ್ದಾನೆ. ಸದ್ಯ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ತಮ್ಮ ಪತ್ನಿ ಕಾರಣವಿಲ್ಲದೆ ಹಲ್ಲೆ ಮಾಡುತ್ತಿದ್ದಾಳೆ, ಬಟ್ಟೆಯನ್ನು ಚಿಂದಿ ಮಾಡುತ್ತಿದ್ದಾಳೆ, ಹಿಗ್ಗಾಮುಗ್ಗಾ ಥಳಿಸುತ್ತಾಳೆ, ಕ್ರಿಕೆಟ್ ಬ್ಯಾಟ್, ಐರನ್ ಪ್ಯಾನ್, ಪಾತ್ರೆಗಳಲ್ಲಿ ಹೊಡೆಯುತ್ತಾಳೆ. ಯಾವುದಕ್ಕೆ ಹೊಡೆಯುತ್ತಾಳೆ ಎಂದರೆ ಉತ್ತರವಿಲ್ಲ. ಆಕೆಯ ಕಾಟದಿಂದ ಮುಕ್ತಿ ಕೊಡಿಸಿ ಎಂದು ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.