ಉಳ್ಳಾಲ: ಸಮುದ್ರ ವಿಹಾರಕ್ಕೆ ಬಂದ ಮೈಸೂರು ಮೂಲದ ಮಹಿಳೆ ನೀರುಪಾಲು
Sunday, May 29, 2022
ಉಳ್ಳಾಲ: ಕುಟುಂಬದೊಂದಿಗೆ ವಿಹಾರಕ್ಕೆಂದು ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್ ಗೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ಸಮುದ್ರ ಪಾಲಾಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಮೈಸೂರು ನಿವಾಸಿ ಭಾಗ್ಯಲಕ್ಷ್ಮಿ(46) ಸಮುದ್ರ ಪಾಲಾದ ಮಹಿಳೆ.
ಭಾಗ್ಯಲಕ್ಷ್ಮಿಯವರು ಪತಿ, ಮೂವರು ಪುತ್ರಿಯರು ಹಾಗೂ ಮೊಮ್ಮಗಳೊಂದಿಗೆ ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದರು. ಅವರು ಪಂಪ್‌ವೆಲ್ ಬಳಿಯ ಲಾಡ್ಜ್ ನಲ್ಲಿ ತಂಗಿದ್ದು, ಶನಿವಾರ ಬೆಳಗ್ಗೆ ಕುಟುಂಬದೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಅಲ್ಲಿಂದ ಉಳ್ಳಾಲ ಸಮ್ಮರ್ ಸ್ಯಾಂಡ್ಸ್ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ, ಭಾಗ್ಯಲಕ್ಷ್ಮಿಯವರ ಪತಿ ಹಾಗೂ ಮಗು ಭಾರೀ ಅಲೆಗಳ ನಡುವೆ ಸಿಲುಕಿದ್ದರು. ಅವರನ್ನು ರಕ್ಷಿಸಲೆಂದು ಭಾಗ್ಯಲಕ್ಷ್ಮಿ ಸಮುದ್ರಕ್ಕಿಳಿದಿದ್ದಾರೆ. ಆದರೆ ದುರದೃಷ್ಟವಶಾತ್ ಭಾಗ್ಯಲಕ್ಷ್ಮಿಯವರು ಸಮುದ್ರದ ಅಲೆಗೆ ಸಿಲುಕಿ ನೀರು ಪಾಲಾಗಿದ್ದಾರೆ.
ಭಾಗ್ಯಲಕ್ಷ್ಮಿಯವರ ಪತಿ ಹಾಗೂ ಮಕ್ಕಳು ಕಿರುಚಾಡಿದ್ದು, ಇದನ್ನು ಗಮನಿಸಿ ತಕ್ಷಣ ಸಮೀಪದಲ್ಲೇ ಇದ್ದ ಮೀನುಗಾರರು ಮಹಿಳೆಯನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆ ಕೊಂಡೊಯ್ಯುವ ದಾರಿ ಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.