ಬ್ಯಾಂಕ್ ಖಾತೆ ದುರ್ಬಳಕೆ ಮಾಡಿದ್ದಾರೆಂದು ಪತಿ, ಮಾವನ ವಿರುದ್ಧವೇ ಠಾಣೆಯ ಮೆಟ್ಟಿಲೇರಿದ ನಟಿ ಚೈತ್ರಾ ಹಳ್ಳಿಕೇರಿ
Tuesday, May 24, 2022
ಮೈಸೂರು: ಕೆಲ ಸಮಯಗಳಿಂದ ಯಾವ ಸಿನಿಮಾದಲ್ಲಿಯೂ ನಟಿಸದಿದ್ದರೂ ಸದ್ಯ 'ಖುಷಿ' ಸಿನಿಮಾ ನಟಿ ಚೈತ್ರಾ ಹಳ್ಳಿಕೇರಿ ಇದೀಗ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಲಾಗಿದೆ ಎಂದು ಪತಿ ಹಾಗೂ ಮಾವನ ವಿರುದ್ಧವೇ ದೂರು ದಾಖಲಿಸಿ ಸುದ್ದಿಯಲ್ಲಿದ್ದಾರೆ.
ಪತಿ ಹಾಗೂ ಮಾವ ತಮ್ಮ ಅನುಮತಿಯಿಲ್ಲದೆ ಗೋಲ್ಡ್ ಲೋನ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾತೆ. ಈ ಹಿನ್ನೆಲೆಯಲ್ಲಿ ಪತಿ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್ ವಿರುದ್ಧ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಬ್ಬರೂ ತಮ್ಮ ಸಹಿಯನ್ನು ನಕಲಿ ಮಾಡಿ ಗೋಲ್ಡ್ ಲೋನ್ ಪಡೆದಿದ್ದಾರೆ. ಈ ಕೃತ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ. ಇದೀಗ ತನಗೆ ವಂಚನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಟಿ ಚೈತ್ರಾ ಹಳ್ಳಿಕೇರಿ ಮೂರು ದಿನಗಳ ಹಿಂದೆಯೇ ದೂರು ನೀಡಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಂದಹಾಗೆ ಚೈತ್ರಾ ಹಳ್ಳಿಕೇರಿಯವರು ಗುನ್ನ, ಶಿಷ್ಯ, ಖುಷಿ ಹಾಗೂ ಗೌಡ್ರು ಸೇರಿದಂತೆ ಒಂದಿಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸಿನಿಮಾದಿಂದ ದೂರ ಉಳಿದಿದ್ದಾರೆ.