ಪುತ್ರಿಯ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿ ಪತಿ ಮನೆಗೆ ಕಳುಹಿಸಿಕೊಟ್ಟ ಮರುಕ್ಷಣವೇ ತಂದೆ ಮೃತ್ಯು: ಛೇ... ಇಂದೆಂಥಹಾ ದುರಂತ!
Friday, May 13, 2022
ಕೊಡಗು: ಪುತ್ರಿಯ ವಿವಾಹ ಸಂಭ್ರಮದಲ್ಲಿದ್ದ ತಂದೆ ಎಲ್ಲವೂ ಸುಸೂತ್ರವಾಗಿ ನೆರವೇರಿಸಿ ಪತಿಯ ಮನೆಗೆ ಕಳುಹಿಸಿಕೊಟ್ಟು ಎಲ್ಲವನ್ನೂ ಸಾಂಗವಾಗಿ ನಡೆಸಿಕೊಟ್ಟು ನಿಟ್ಟುಸಿರು ಬಿಡುವಷ್ಟರಲ್ಲಿ ಆಗಬಾರದ್ದೊಂದು ಆಗಿಹೋಗಿದೆ. ಪರಿಣಾಮ ಸಂಭ್ರಮದಲ್ಲಿದ್ದ ಕುಟಂಬಸ್ಥರು ಶೋಕಸಾಗರದಲ್ಲಿ ಮುಳುಗುವಂತಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣವೇನೆಂದರೆ, ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ ವಧುವಿನ ತಂದೆ ಕಿಬ್ಬೆಟ್ಟ ಗ್ರಾಮದ ಚಿನ್ನಪ್ಪ (60) ಎಂಬವರು ಮೃತಪಟ್ಟಿದ್ದು.
ಮದುವೆಯ ಬಳಿಕ ಸಂಜೆ ಹೊತ್ತಿಗೆ ನವವಿವಾಹಿತರನ್ನು ಕಾರು ಹತ್ತಿಸಿ ಗೋಕಾಕ್ಗೆ ಕಳುಹಿಸಿಕೊಟ್ಟಿದ್ದಾರೆ. ಅತ್ತ ಅವರು ಹೋಗುತ್ತಿದ್ದಂತೆ ಇತ್ತ ಚಿನ್ನಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಭ್ರಮದ ವಾತಾವರಣ ಕೆಲವೇ ಕ್ಷಣಗಳಲ್ಲಿ ಶೋಕಸಾಗರದಲ್ಲಿ ಮುಳುಗಿದೆ.