ಹಳೆಯಂಗಡಿ: ಮದುವೆ ಮಂಟಪದಿಂದಲೇ ವರ - ವಧು ಪರಾರಿ; ಯಾಕೆ ಗೊತ್ತೇ?
Thursday, May 5, 2022
ಹಳೆಯಂಗಡಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ವಧುವಿನ ಕತ್ತಿಗೆ ವರ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಈ ವರ ಏಕಾಏಕಿ ವಧುವಿನೊಂದಿಗೇ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿಯ ಮದುವೆ ಸಭಾಂಗಣವೊಂದರಲ್ಲಿ ನಡೆದಿದೆ.
ತೀರ್ಥಹಳ್ಳಿ ಮೂಲದ 40ರ ಹರೆಯದ ವರ ಶಿವಮೊಗ್ಗ - ಮೂಡುಬಿದಿರೆ ರಸ್ತೆಯಲ್ಲಿ ಸಂಚಾರ ಮಾಡುವ ಖಾಸಗಿ ಬಸ್ ಚಾಲಕನಾಗಿದ್ದ. ಈತ ನಗರದ ಸಸಿಹಿತ್ಲು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಪರಸ್ಪರ ಪ್ರೀತಿಸಿದ್ದ ಈ ಜೋಡಿ ಇಂದು ಮದುವೆಯಾಗಲು ಸಿದ್ಧತೆ ನಡೆಸಿತ್ತು.
ಆದರೆ ಮದುವೆ ಸಭಾಂಗಣದಲ್ಲಿ ವಿವಾಹ ಶಾಸ್ತ್ರ ನಡೆಯುತ್ತಿರುವಾಗಲೇ ತಾನು ವರನ ಮೊದಲನೇ ಹೆಂಡತಿ ಎಂದೊಬ್ಬ ಮಹಿಳೆ ಅಲ್ಲಿಗೆ ಬಂದಿದ್ದಾರೆ. ಆಕೆ ತನ್ನ ಪತಿಯ ಎರಡನೇ ಮದುವೆಯ ಬಗ್ಗೆ ತಗಾದೆ ತೆಗೆದ್ದಾಳೆ. ಈ ವರನಿಗೆ ಈ ಮೊದಲೇ ಮದುವೆಯಾಗಿದ್ದು ಒಂದು ಗಂಡು ಮಗುವಿದೆ ಎಂದು ರಂಪಾಟ ಮಾಡಿದ್ದಾರೆ.
ಈ ಸಂದರ್ಭ ಸಭಾಂಗಣದ ಹೊರಗಡೆ ವರ ಹಾಗೂ ವಧುವಿನ ಫೋಟೋ ಶೂಟ್ ನಡೆಯುತ್ತಿತ್ತು. ವರನಿಗೆ ಈ ಗಲಾಟೆಯ ಮಾಹಿತಿ ಲಭ್ಯವಾಗಿದೆ. ಆತ ತಕ್ಷಣ ವಧುವಿನ ಮೈಮೇಲಿನ ಚಿನ್ನಾಭರಣ ಸಹಿತ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವರನ ಕಡೆಯಿಂದ ಕೇವಲ ಐವರು ಮಾತ್ರ ಮದುವೆಗೆ ಬಂದಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ವಧುವಿನ ಪೋಷಕರು ಘಟನೆಯ ಮೇರೆಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.