ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ: ಪತ್ನಿ, ಇಬ್ಬರು ಮಕ್ಕಳು ಸಜೀವ ದಹನ, ಪತ್ನಿಗೆ ಗಂಭೀರ ಗಾಯ
Saturday, May 21, 2022
ಜಲಂಧರ್: ಸಿಲಿಂಡರ್ ನಿಂದ ಅಡುಗೆ ಅನಿಲದ ಸೋರಿಕೆಯ ಪರಿಣಾಮ ಮನೆಗೆ ಬೆಂಕಿ ಹತ್ತಿಕೊಂಡು ಪತಿ ಹಾಗೂ ಈರ್ವರು ಮಕ್ಕಳು ಸಜೀವ ದಹನಗೊಂಡರೆ, ಪತ್ನಿ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಲಮ್ಮಾ ಗ್ರಾಮದ ಚೌಕ್ ಪ್ರದೇಶದಲ್ಲಿ ನಡೆದಿದೆ.
ಬಿಹಾರ ರಾಜ್ಯದ ವಲಸೆ ಕಾರ್ಮಿಕ ರಾಜ್ ಕುಮಾರ್ ಬಾಡಿಗೆ ಮನೆಯೊಂದರಲ್ಲಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗಿದೆ. ಆದರೆ ಈ ಬಗ್ಗೆ ಅರಿವಿರದೆ ಬೆಳಗ್ಗೆ ಎಂದಿನಂತೆ ಗ್ಯಾಸ್ ನಲ್ಲಿ ಅಡುಗೆ ಮಾಡಲು ಬೆಂಕಿ ಹಚ್ಚಿದ್ದಾರೆ. ಪರಿಣಾಮ ದಿಢೀರನೆ ಬೆಂಕಿ ಆವರಿಸಿ ಇಡೀ ಮನೆ ಸುಟ್ಟುಹೋಗಿದೆ ಎಂದು ತಿಳಿಸಿದ್ದಾರೆ.
ಮನೆಗೆ ಬೆಂಕಿ ತಗುಲಿದ ಪರಿಣಾಮ ರಾಜ್ಕುಮಾರ್ ಹಾಗೂ ಇಬ್ಬರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ರಾಜ್ ಕುಮಾರ್ ಪತ್ನಿ ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದು, ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.