
ಸೈಕಲ್ ನಲ್ಲಿ ಫುಡ್ ಡೆಲಿವರಿ ಮಾಡುತಿದ್ದ ಝೊಮ್ಯಾಟೊ ಬಾಯ್ ಗೆ ಸರ್ಪ್ರೈಸ್ ಆಗಿ ಬೈಕ್ ಗಿಫ್ಟ್ ಮಾಡಿದ ಪೊಲೀಸರು!
Tuesday, May 3, 2022
ಇಂದೋರ್: ಸೈಕಲ್ ನಲ್ಲಿ ಫುಡ್ ಡೆಲಿವರಿ ಮಾಡಿ ಸಂಪಾದನೆ ಮಾಡುತ್ತಿದ್ದ ಬಡ ಯುವಕನೋರ್ವನಿಗೆ ಪೊಲೀಸರು ನೆರವಿನ ಸಹಾಯಹಸ್ತ ಚಾಚಿದ್ದಾರೆ. ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವನು ತಡರಾತ್ರಿಯೂ ಸೈಕಲ್ನಲ್ಲಿಯೇ ಗ್ರಾಹಕರ ಮನೆಮನೆಗಳಿಗೆ ಫುಡ್ ಡೆಲಿವರಿ ಮಾಡುತ್ತಿದ್ದ.
ಆದರೆ ಈ ಯುವಕ ನಿಗದಿತ ಸಮಯದಲ್ಲಿ ಗ್ರಾಹಕರ ಮನೆಯನ್ನು ತಲುಪಲು ವೇಗವಾಗಿ ಸೈಕಲ್ ತುಳಿಯುತ್ತಾ ಕಷ್ಟ ಪಡುತ್ತಿದ್ದ. ಈ ದೃಶ್ಯವನ್ನು ವೀಕ್ಷಿಸಿದ ಪೊಲೀಸರು ಆತನಿಗೆ ಹೊಸದಾದ ಬೈಕ್ ಅನ್ನು ಖರೀದಿಸಿ ಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಇಂದೋರ್ನಲ್ಲಿ. ಇಲ್ಲಿನ ಜೈ ಹಲ್ದೆ ಎಂಬ ಯುವಕ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತ ರಾತ್ರಿ ಹೊತ್ತು ಸೈಕಲ್ ತುಳಿಯುತ್ತ ಫುಡ್ ಡೆಲಿವರಿ ಮಾಡುತ್ತಿರುವುದನ್ನು ರಾತ್ರಿ ಗಸ್ತುನಲ್ಲಿದ್ದ ಪೊಲೀಸ್ ಅಧಿಕಾರಿ ತೆಹಜೀಬ್ ಖಾಜಿಯವರ ಕಣ್ಣಿಗೆ ಬಿದ್ದಿದಾನೆ. ಅವರು ಪ್ರತಿದಿನ ಈತ ಝೊಮ್ಯಾಟೊ ಡೆಲಿವರಿ ಬಾಯ್ ಸೈಕಲ್‌ನಲ್ಲಿ ಹೋಗುವುದನ್ನು ನೋಡುತ್ತಿದ್ದರು. ಒಂದು ದಿನ ಆತನನ್ನು ತಡೆದ ಪೊಲೀಸ್ ಅಧಿಕಾರಿ, ಸೈಕಲ್‌ನಲ್ಲಿ ಏಕೆ ಹೋಗ್ತಿದ್ದೀಯಾ? ಕಷ್ಟ ಆಗುವುದಿಲ್ಲವೇ ಎಂದು ಕೇಳಿದ್ದಾರೆ.
ಆದಕ್ಕೆ ಅದಕ್ಕುತ್ತರಿಸಿದ ಯುವಕ ಜೈ ಹಲ್ದೆ, ಮನೆಯಲ್ಲಿ ಕಡುಬಡತನ ಇದೆ. ತಾಯಿ ಮನೆಗೆಲಸ ಮಾಡುತ್ತಾರೆ. ನಾನು ಸೈಕಲ್ನಲ್ಲಿಯೇ ಫುಡ್ ಡೆಲಿವರಿ ಮಾಡುವುದರಿಂದ ಬರೀ 200-300 ರೂ. ಮಾತ್ರ ಸಂಪಾದನೆ ಆಗುತ್ತೆ. ಆದ್ದರಿಂದ ಬೈಕ್ ತಗೋಳೋಕೆ ಆಗ್ತಿಲ್ಲ ಸರ್ ಎಂದು ಹೇಳಿ ಹೊರಟಿದ್ದಾನೆ. ಯುವಕನ ಕಷ್ಟಕ್ಕೆ ಸ್ಪಂದಿಸಿದ ಪೊಲೀಸ್ ಅಧಿಕಾರಿ ತೆಹಜೀಬ್ ಖಾಜಿ ಪೊಲೀಸ್ ಠಾಣೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬಳಿಕ ಸಿಬ್ಬಂದಿಯೆಲ್ಲರೂ ಹಣ ಸಂಗ್ರಹಸಿ ಹೊಸದಾಗಿ ಬೈಕ್ ಖರೀದಿಸಿ ಪೊಲೀಸ್ ಠಾಣೆಗೆ ಯುವಕನನ್ನು ಕರೆಸಿದ್ದಾರೆ. ಪರಿಣಾಮ ಯುವಕ ಮತ್ತು ಆತನ ಕುಟಂಬಸ್ಥರು ಗಾಬರಿಯಾಗಿದ್ದರು.
ಫುಡ್ ಡೆಲಿವರಿ ಬಾಯ್ ಜೈ ಹಲ್ದೆ ಠಾಣೆಗೆ ಬರುತ್ತಿದ್ದಂತೆ ಆತನಿಗೆ ಸರ್ಪ್ರೈಸ್ ಆಗಿ ಬೈಕ್ ಅನ್ನು ಉಡುಗೊರೆ ಕೊಟ್ಟಿದ್ದಾರೆ. ಇದರಿಂದ ಆತನ ಖುಷಿಗೆ ಪಾರವೇ ಇರಲಿಲ್ಲ. ಪೊಲೀಸರು ಮುಂಗಡ ಹಣ ನೀಡಿ ಬೈಕ್ ಖರೀದಿಸಿ ಕೊಟ್ಟಿದ್ದಾರೆ. ಬೈಕ್ ಪಡೆದ ಬಳಿಕ ಜೈ ಹಲ್ದೆಯ ಆದಾಯ ಮೂರು ಪಟ್ಟು ಹೆಚ್ಚಾಗಲಿದೆ. ಉಳಿದ ಸಾಲದ ಕಂತನ್ನು ತಾನೇ ಕಟ್ಟಿಕೊಳ್ಳುವೆ ಎಂದೂ ಆತ ಹೇಳಿದ್ದಾನೆ. ಇಂದೋರ್ನ ವಿಜಯನಗರ ಠಾಣೆ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.