ಫಲಿಸಿದ ಹರಕೆ: ಮದುವೆ ಸಮಾರಂಭದಲ್ಲಿ ಕಳುವಾದ ಮಗುವಿನ ಸರ ದೈವದ ಕಾಲು ದೀಪದ ಬುಡದಲ್ಲಿ ಪತ್ತೆ
Sunday, May 29, 2022
ಮಂಗಳೂರು: ಮದುವೆ ಸಮಾರಂಭವೊಂದರಲ್ಲಿ ಕಳುವಾಗಿದ್ದ ಚಿನ್ನದ ಸರವೊಂದು ದೈವಸ್ಥಾನದ ಒಳಗಿರುವ ಕಾಲು ದೀಪದ ಬುಡದಲ್ಲಿ ಪತ್ತೆಯಾಗಿರುವ ಅಚ್ಚರಿಯ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
ಪಡುಬಿದ್ರೆಯಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಮಗುವಿನ ಚಿನ್ನದ ಸರ ಮೇ 18ರಂದು ಕಳವಾಗಿತ್ತು. ಹಿನ್ನೆಲೆಯಲ್ಲಿ ಮಗುವಿನ ಕುಟುಂಬಸ್ಥರು ನಾಂಜಾರು ಶ್ರೀ ಧರ್ಮದೈವ ಜಾರಂದಾಯ ದೈವದ ಮೊರೆಹೊಕ್ಕಿದ್ದರು. ಆ ಬಳಿಕ ದೈವ ಕಾರ್ಣಿಕವೋ, ಕುಟುಂಬಿಕರ ಹರಕೆಯ ಫಲವೋ ಎಂಬಂತೆ 10ದಿನಗಳ ಬಳಿಕ ಚಿನ್ನದ ಸರ ನಾಂಜಾರು ದೈವದ ಮುಂಭಾಗದ ಉರಿಯುತ್ತಿದ್ದ ಕಾಲುದೀಪದ ಬುಡದಲ್ಲಿ ಪತ್ತೆಯಾಗಿದೆ.
ಇದೀಗ ಈ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದು, ದೈವದ ಕಾರ್ಣಿಕವೇ ಇದು ಎಂಬಂತೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಈ ನಾಂಜಾರು ಶ್ರೀ ಧರ್ಮಜಾರಂದಾಯ ದೈವಸ್ಥಾನ ಉಡುಪಿ ಜಿಲ್ಲೆಯ ಬೆಳಪು ಪಣಿಯೂರು ಎಂಬಲ್ಲಿದೆ.