ಆಸ್ಪತ್ರೆ ಸಿಬ್ಬಂದಿ ಅಜಾಗರೂಕತೆಯಿಂದ ನಾಲ್ವರು ಮಕ್ಕಳಿಗೆ ತಗುಲಿದ ಎಚ್ಐವಿ ಸೋಂಕು: 'ಮಹಾ'ಸರಕಾರಕ್ಕೆ ಎನ್ ಹೆಚ್ಆರ್ ಸಿ ನೋಟಿಸ್
Saturday, May 28, 2022
ನವದೆಹಲಿ: ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯೊಂದರ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದ ಏನೂ ಅರಿಯದ ಮುಗ್ಧ ಕಂದಮ್ಮಗಳಿಗೆ ಎಚ್ಐವಿ ಸೋಂಕು ತಗುಲಿದೆ. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ಶುಕ್ರವಾರ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ್ದು, 6 ವಾರಗಳೊಳಗೆ ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ನಾಗ್ಪುರದ ಜರಿಪಟ್ಕಾ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯಾ ರೋಗಕ್ಕೆ ತುತ್ತಾಗಿರುವ ನಾಲ್ವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇವರಿಗೆ 15 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡಲಾಗುತ್ತದೆ. ಆದರೆ ರಕ್ತ ನಿಧಿಯಿಂದ ಉಚಿತವಾಗಿ ದೊರಕುವ ರಕ್ತವನ್ನು ವೈದ್ಯರು ತಪಾಸಣೆ ಮಾಡದೆ ಮಕ್ಕಳಿಗೆ ನೀಡಿದ್ದರು. ಮಕ್ಕಳಿಗೆ ನೀಡಲಾದ ರಕ್ತದಲ್ಲಿ ಹೆಚ್ಐವಿ ಸೋಂಕಿನ ಅಂಶವಿತ್ತು. ಪರಿಣಾಮ ನಾಲ್ವರು ಮಕ್ಕಳು ಭೀಕರ ಸೋಂಕಿಗೆ ತುತ್ತಾಗಿದ್ದಾರೆ. ಈ ನಾಲ್ವರಲ್ಲಿ ಒಂದು ಮಗು ಮೃತಪಟ್ಟಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಕರಣದ ಕುರಿತು ತನಿಖೆ ನಡೆಸಿ ಆರು ವಾರಗಳೊಳಗೆ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ತೆಗೆದುಕೊಂಡ ಕ್ರಮ ಅಥವಾ ತೆಗೆದುಕೊಳ್ಳಲು ಪ್ರಸ್ತಾಪಿಸಲಾದ ಕ್ರಮದ ಕುರಿತು ವರದಿಯನ್ನು, ಜೊತೆಗೆ ಚಿಕಿತ್ಸೆ ಮತ್ತು ಪರಿಹಾರದ ಕುರಿತು ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಎನ್‌ಹೆಚ್‌ಆರ್‌ಸಿ ತಿಳಿಸಿದೆ.