ಮಂಗಳೂರು: ಕಟೀಲು ದೇವಳದ ಆಸ್ರಣ್ಣ ಕುಟುಂಬಸ್ಥರು - ಅರ್ಚಕರ ನಡುವೆ ಜಟಾಪಟಿಯಲ್ಲಿ ಮಧ್ಯಾಹ್ನದ ಪೂಜೆಯೇ ವಿಳಂಬ!
Thursday, May 12, 2022
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಸ್ರಣ್ಣ ಕುಟುಂಬಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿಯಲ್ಲಿ ನಿನ್ನೆ ಮಧ್ಯಾಹ್ನದ ದೇವರ ಪೂಜೆಯನ್ನೇ ವಿಳಂಬಗೊಂಡಿದೆ. ಬಳಿಕ ಮುಜರಾಯಿ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ತಾಕೀತು ನೀಡಿದ ಬಳಿಕ ಆಸ್ರಣ್ಣರು ಪೂಜೆಯನ್ನು ನೆರವೇರಿಸಿರುವ ಪ್ರಸಂಗವೊಂದು ನಡೆದಿದೆ.
ಶ್ರೀಕ್ಷೇತ್ರ ಕಟೀಲಿನಲ್ಲಿ ಕೀಳು ಶಾಂತಿ ಎಂಬ ಅರ್ಚಕರ ಹುದ್ದೆಯ ವಿಚಾರದಲ್ಲಿ ಕಳೆದ 2 ದಶಕಗಳ ಆಚೆಯಿಂದಲೂ ಮುಜರಾಯಿ ಆಯುಕ್ತರ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಸುದೀರ್ಘ ಕಾಲದ ನ್ಯಾಯಾಲಯದ ಹೋರಾಟದ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿಯವರು ಕಳೆದ ಮಾರ್ಚ್ 25ರಂದು ಈ ಬಗ್ಗೆ ಆದೇಶವನ್ನು ನೀಡಿದ್ದರು.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಗುರುರಾಜ ಭಟ್ ಅವರೇ ಆನುವಂಶಿಕ ಕೀಳು ಶಾಂತಿ ಅರ್ಚಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ. ಈ ಮೂಲಕ ಕಟೀಲು ದೇವಸ್ಥಾನದ ಆಸ್ರಣ್ಣರಿಬ್ಬರ ವಿರುದ್ಧ ತೀರ್ಪು ಬಂದಿದೆ. ಇದು ಅವರ ಪ್ರತಿಷ್ಠೆಗೆ ಕುಂದಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ಆದೇಶವನ್ನು ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಆಸ್ರಣ್ಣ ಕುಟುಂಬಸ್ಥರು ಪಾಲಿಸಲು ತಯಾರಿರಲಿಲ್ಲ.
ಮೇ 11ರಂದು ಬೆಳಗ್ಗೆ ಕೀಳು ಶಾಂತಿ ಕರ್ತವ್ಯಕ್ಕೆಂದು ಹಾಜರಾಗಿದ್ದ ಗುರುರಾಜ ಭಟ್ ಅವರನ್ನು ಆಸ್ರಣ್ಣ ಕುಟುಂಬಸ್ಥರ ಅಣತಿಯಂತೆ ಸೆಕ್ಯುರಿಟಿಯವರು ತಡೆ ಒಡ್ಡಿದ್ದರು. ಆದರೂ ಅವರು, ದೇವಸ್ಥಾನದೊಳಗೆ ಹೊಕ್ಕ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ. ಇದನ್ನೇ ಹಿನ್ನಲೆಯಾಗಿರಿಸಿದ ಆಸ್ರಣ್ಣ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ದೇವಿಯ ಮಧ್ಯಾಹ್ನದ ಪೂಜೆಯನ್ನು ನಡೆಸದೆ ವಿಳಂಬಿಸಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದ ಪೂಜೆಯನ್ನು ವಿಳಂಬಿಸಿದ್ದರಿಂದ ಮುಜರಾಯಿ ಇಲಾಖೆಯಿಂದ ಕರೆ ಬಂದಿದೆ. ಆ ಬಳಿಕ ಅಧಿಕಾರಿಗಳಿಂದ ಬಂದಿರುವ ತಾಕೀತಿನ ಬೆನ್ನಲ್ಲೇ 12 ಗಂಟೆಗೆ ನಡೆಯಬೇಕಿದ್ದ ಮಧ್ಯಾಹ್ನದ ಪೂಜೆಯು 2 ಗಂಟೆ ಸುಮಾರಿಗೆ ನೆರವೇರಿದೆ ಎಂದು ಹೇಳಲಾಗುತ್ತಿದೆ. ದೇವಿಯ ಪೂಜೆ ತಡವಾದ ಹಿನ್ನೆಲೆಯಲ್ಲಿ ಮಕ್ಕಳ ಅನ್ನಪ್ರಾಶನ, ಭಕ್ತರಿಗೆ ನೀಡುವ ಅನ್ನಪ್ರಸಾದ ವಿತರಣೆಯಲ್ಲಿಯೂ ವಿಳಂಬವಾಗಿದೆ ಎಂದು ತಿಳಿದು ಬಂದಿದೆ.