ಕಾಲೇಜು ಬಸ್ ಚಾಲಕನನ್ನು ವಿವಾಹವಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಆಕೆಯ ಕುಟುಂಬಸ್ಥರಿಂದಲೇ ಕಾದಿತ್ತು ಶಾಕ್!
Wednesday, May 4, 2022
ವೇಮುರು: ಬಸ್ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಮನೆಯವರೇ ಅಪಹರಣ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ.
ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಶ್ವನಾಥ್ ಅದೇ ಕಾಲೇಜಿನ ಬಸ್ ಚಾಲಕನಾಗಿದ್ದ. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಈ ಹಿನ್ನೆಲೆಯಲ್ಲಿ ಇಬ್ಬರೂ ಕಳೆದ ಎಪ್ರಿಲ್ 11ರಂದು ಮದುವೆಯಾಗಿದ್ದರು. ಆದರೆ, ಈ ಮದುವೆಗೆ ಲಕ್ಷ್ಮಿ ಪೂಜಿತಾ ಮನೆಯವರಿಗೆ ಸಮ್ಮತಿಯಿರಲಿಲ್ಲ. ಅಲ್ಲದೆ ಆಕೆ ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸುವ ಮುನ್ಮವೇ ಮದುವೆಯಾಗಿದ್ದಳು. ಮದುವೆಯ ಬಳಿಕ ನವದಂಪತಿ ಅನಂತವರಂನಲ್ಲಿ ನೆಲೆಸಿದ್ದರು.
ಸೋಮವಾರ ಬೆಳಗ್ಗೆ ಅನಂತವರಂನಲ್ಲಿರುವ ಲಕ್ಷ್ಮಿ ಪೂಜಿತಾ ಆಕೆಯ ಅತ್ತೆ ಮನೆಗೆ ಬಂದಿದ್ದ ಆಕೆಯ ಅಜ್ಜಿ, ಅತ್ತೆ ಹಾಗೂ ಮಾವ 'ನಿನ್ನ ತಾಯಿಗೆ ಹುಷಾರಿಲ್ಲ. ನೀನು ಮನೆಗೆ ಬಂದು ಆಕೆಯನ್ನು ನೋಡಬೇಕು' ಎಂದು ಹೇಳಿದ್ದಾರೆ. ಆದರೆ, ಇದನ್ನು ನಂಬಲು ಒಪ್ಪದ ಪೂಜಿತಾ ಅವರೊಂದಿಗೆ ತೆರಳು ನಿರಾಕರಿಸಿದ್ದಾಳೆ. ಇದಾದ ಬಳಿಕ ಪೂಜಿತಾ ಅವರ ತಂದೆ ಶ್ರೀನಿವಾಸ ರೆಡ್ಡಿ, ಸಹೋದರ ನಿರಂಜನ್ ರೆಡ್ಡಿ ಮತ್ತು ಕೆಲ ಯುವಕರು ಪೂಜಿತಾಳನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಲಕ್ಷ್ಮಿ ಪೂಜಿತಾಳನ್ನು ಹೊತ್ತುಯ್ಯುವ ಸಂದರ್ಭ ಆಕೆಯ ಪತಿ ವಿಶ್ವನಾಥ್ ಬಿಡಿಸಲು ಪ್ರಯತ್ನಿಸಿದ್ದಾನೆ. ಆದರೆ ಅವರು ಆತನ ಮೇಲೆ ಹಲ್ಲೆ ನಡೆಸಿ ಲಕ್ಷ್ಮಿ ಪೂಜಿತಾಳನ್ನು ಅಪಹರಿಸಿದ್ದಾರೆ. ಈ ಸಂಬಂಧ ವಿಶ್ವನಾಥ್ ಸ್ಥಳೀಯ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.