ಸಾಲ ತೀರಿಸಲು ಹೊಸ ತಂತ್ರ ಹೂಡಿದ ಎನ್ ಆರ್ ಐ ದಂಪತಿ: ಕೇರಳ ಸರಕಾರದಿಂದ ಶಾಕ್
Tuesday, May 10, 2022
ತಿರುವನಂತಪುರಂ(ಕೇರಳ): ಹೊಸ ತಂತ್ರಗಾರಿಕೆಯ ತಮಗಿರುವ ಸಾಲವನ್ನು ತೀರಿಸಲೆಂದು ಹೊರಟ ಎನ್ಆರ್ಐ ದಂಪತಿಗೆ ಕೇರಳ ಸರಕಾರ ಶಾಕ್ ನೀಡಿದೆ. ಅವರು ತಮ್ಮ ಮನೆಯನ್ನು ಲಕ್ಕಿ ಡ್ರಾ ಮೂಲಕ ಮಾರಾಟಕ್ಕಿಟ್ಟಿದ್ದರು. ಆದರೆ, ಇದು ಕಾನೂನುಬಾಹಿರವೆಂದು ಕೇರಳ ಸರಕಾರ ಈ ಪ್ರಕ್ರಿಯೆಯನ್ನು ರದ್ದು ಮಾಡಲು ಆದೇಶಿಸಿದ್ದು, ದಂಪತಿಗೆ ನೋಟಿಸ್ ಜಾರಿ ಮಾಡಿದೆ.
ತಿರುವನಂತಪುರಂನ ವಟ್ಟಿಯುರ್ಕಾವು ಎಂಬಲ್ಲಿನ ನಿವಾಸಿಗಳಾದ ಅಣ್ಣಾ ಹಾಗೂ ಜೋ ದಂಯ ಮನೆಯನ್ನು ಲಕ್ಕಿ ಡ್ರಾ ಮೂಲಕ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಲಾಟರಿ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೆ, ಲಾಟರಿ ಪದ್ಧತಿ ನಿಷೇಧಿತವಾಗಿದ್ದು, ಇದನ್ನು ಸರ್ಕಾರ ಮಾತ್ರ ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮಾರಾಟವನ್ನು ನಿಲ್ಲಿಸುವಂತೆ ಎನ್ಆರ್ಐ ದಂಪತಿಗೆ ರಾಜ್ಯ ಲಾಟರಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
ವಿದೇಶದಲ್ಲಿ ವೃತ್ತಿಯಲ್ಲಿದ್ದ ದಂಪತಿ ಕೋವಿಡ್ ಬಳಿಕ ಸ್ವದೇಶಕ್ಕೆ ವಾಪಸ್ ಆಗಿ ಉದ್ಯಮ ನಡೆಸುತ್ತಿದ್ದರು. ಆದರೆ, ಅವರು ನಷ್ಟ ಅನುಭವಿಸಿದ್ದರು. ಪರಿಣಾಮ ಅವರಿಗೆ 34 ಲಕ್ಷ ರೂ. ಸಾಲವಾಗಿತ್ತು. ಇದನ್ನು ತೀರಿಸಲು ತಮ್ಮ 1300 ಚದರಡಿಯ ಮನೆ, 3 ಸೆಂಟ್ಸ್ ಜಾಗವನ್ನು ಲಕ್ಕಿ ಡ್ರಾ ಮೂಲಕ ಮಾರಾಟಕ್ಕಿಟ್ಟಿದ್ದರು.
ಇದಕ್ಕಾಗಿ 3700 ಕೂಪನ್‌ಗಳನ್ನು ಮಾರಾಟ ಮಾಡಿ, ಇದರಿಂದ 74 ಲಕ್ಷ ರೂ.ಗಳನ್ನು ಸಂಗ್ರಹಿಸುವ ಆಲೋಚನೆ ಅವರದಾಗಿತ್ತು. ಒಂದು ಕೂಪನ್ಗೆ ತಲಾ 2,000 ರೂ. ನಿಗದಿ ಮಾಡಿ, ಈಗಾಗಲೇ 200 ಕೂಪನ್‌ಗಳನ್ನು ಮಾರಾಟ ಮಾಡಿದ್ದರು. ಆದರೆ ಇದೀಗ ಲಾಟರಿ ಇಲಾಖೆಯ ಸೂಚನೆಯಿಂದಾಗಿ ಮಾರಾಟವನ್ನು ನಿಲ್ಲಿಸಬೇಕಾಗಿದೆ.