ಕಲ್ಯಾಣ ಮಂಟಪದಿಂದಲೇ ನೇರವಾಗಿ ಬಂದು ಬಿಕಾಂ ಪರೀಕ್ಷೆ ಬರೆದ ಮಂಡ್ಯದ ವಧು
Thursday, May 12, 2022
ಮಂಡ್ಯ: ಮದುವೆ ಮಂಟಪದಿಂದಲೇ ವಧು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದು ಮಾದರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಈ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿ.
ಮಂಡ್ಯ ಜಿಲ್ಲೆಯ ಲಿಂಗಪುರ ಗ್ರಾಮದ ಕಮಲಾ ಹಾಗೂ ಯೋಗೇಂದ್ರರವರ ಪುತ್ರಿ ಐಶ್ವರ್ಯಾ ವಿವಾಹವು ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಎಲ್.ಎಸ್.ಯಶವಂತ್ ಎಂಬ ವರನೊಂದಿಗೆ ನಿಶ್ಚಯವಾಗಿತ್ತು. ವಿವಾಹವು ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ನೆರವೇರಿತ್ತು. ಆದರೆ ಅದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್ ಫ್ಲೂಯೆನ್ಸಿ ವಿಷಯದಲ್ಲಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಧಾರೆ ಮುಗಿದ ತಕ್ಷಣ ನವವಧು ಹಿರಿಯರ ಅನುಮತಿ ಪಡೆದು ಪರೀಕ್ಷೆಗೆ ಹಾಜರಾಗಿದ್ದಾರೆ.
ಮದುವೆಯಿಂದ ಪರೀಕ್ಷೆಗೆ ತೊಂದರೆಯಾಗಬಾರದೆಂದು ಯೋಚಿಸಿ ಎರಡೂ ಕುಟುಂಬದ ಹಿರಿಯರು ಐಶ್ವರ್ಯಾಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿ ಕೊಟ್ಟಿದ್ದಾರೆ. ಐಶ್ವರ್ಯಾ ವಧುವಿನ ಅಲಂಕಾರದಲ್ಲೇ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಆಕೆಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಭಾವೀಪತಿಯು ಸಹಕಾರ ನೀಡಿದ್ದಾರೆ. ಪರೀಕ್ಷೆ ಮುಗಿಯುವ ತನಕ ಕಾಲೇಜ್ ಕ್ಯಾಂಪಸ್ನಲ್ಲಿ ಕಾದು ಬಳಿಕ ಪತಿ ಹಾಗೂ ಕುಟುಂಬಸ್ಥರು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ. ಆ ಬಳಿಕ ಯಶವಂತ್ ಕುಟುಂಬಸ್ಥರು ಮನೆ ತುಂಬಿಸಿಕೊಂಡಿದ್ದಾರೆ.