ಮಂಗಳೂರಿನಲ್ಲಿ ರಾಹುಲ್ ಕಕ್ಕೆಯ ಹೆಣ ಬೀಳಲು ಆರು ವರ್ಷದ ಈ ಸೇಡು ಕಾರಣ
Monday, May 9, 2022
ಮಂಗಳೂರು: ಇತ್ತೀಚೆಗೆ ನಗರದ ಎಮ್ಮೆಕೆರೆಯಲ್ಲಿ ಹತ್ಯೆಯಾಗಿರುವ ರೌಡಿಶೀಟರ್ ರಾಹುಲ್ ಕಕ್ಕೆ ಎಂಬಾತನ ಕೊಲೆಯ ಹಿಂದೆ ಆರು ವರ್ಷಗಳ ಸೇಡು ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇದೀಗ ಮಂಗಳೂರು ಪೊಲೀಸರು ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ಕೊಲೆಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಎಮ್ಮೆಕೆರೆ ನಿವಾಸಿಗಳಾದ ಮಹೇಂದ್ರ ಶೆಟ್ಟಿ (27), ಸುಶಿತ್(20), ಬೋಳಾರ ನಿವಾಸಿಯಾದ ಅಕ್ಷಯ್ ಕುಮಾರ್ (25), ಮೋರ್ಗನ್ಸ್ ಗೇಟ್ ನಿವಾಸಿಯಾದ ದಿಲ್ಲೇಶ್ ಬಂಗೇರ(21) ಹಾಗೂ ಒಳಸಂಚು ರೂಪಿಸಿ ಕೃತ್ಯಕ್ಕೆ ಸಹಕರಿಸಿರುವ ಬೋಳಾರ ನಿವಾಸಿ ಶುಭಂ(26), ಎಮ್ಮೆಕೆರೆ ನಿವಾಸಿ ವಿಷ್ಣು ಪಿ.(20) ಬಂಧಿತ ಆರೋಪಿಗಳು.
ಎ.28ರಂದು ನಗರದ ಎಮ್ಮೆಕೆರೆಯ ಕೋಳಿ ಅಂಕಕ್ಕೆ ಬಂದಿದ್ದ ಹೊಯ್ಗೆ ಬಜಾರ್ ನಿವಾಸಿ ರಾಹುಲ್ ತಿಂಗಳಾಯ ಅಲಿಯಾಸ್ ಕಕ್ಕೆ ಸ್ನೇಹಿತರೊಂದಿಗೆ ವಾಪಸ್ ಆಗುತ್ತಿದ್ದ. ಇನ್ನೇನು ಆತ ಸ್ಕೂಟರ್ ನಲ್ಲಿ ಹೊರಡಬೇಕೆನ್ನುವಷ್ಟರಲ್ಲಿ ಮಹೇಂದ್ರ ಶೆಟ್ಟಿ, ಸುಶಿತ್, ದಿಲ್ಲೇಶ್ ಬಂಗೇರ, ಅಕ್ಷಯ ಕುಮಾರ್ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದಿದ್ದಾರೆ. ಅವರನ್ನು ನೋಡಿ ರಾಹುಲ್ ಅಲ್ಲಿಂದ ಓಡಲಾರಂಭಿಸಿದ್ದಾರೆ. ಅವನನ್ನು ಬೆನ್ನಟ್ಟಿಕೊಂಡು ಹೋದ ಆರೋಪಿಗಳು ದೈವಸ್ಥಾನದ ಕಟ್ಟೆ ಹಾರಿ ಓಡಲೆತ್ನಿಸಿದಾತನನ್ನು ಹಿಡಿದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಅಲ್ಲದೆ ಆತನನ್ನು ಎಮ್ಮೆಕೆರೆ ಮೈದಾನಕ್ಕೆ ಎಳೆದು ತಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಅದಾಗಲೇ ಮೃತಪಟ್ಟಿದ್ದ.
ಪ್ರಕರಣದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇದೀಗ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ತಲವಾರು, ನಾಲ್ಕು ಕತ್ತಿ, ಮೂರು ಚೂರಿ, ಎರಡು ಸ್ಕೂಟರ್, ಒಂದು ರಾಯಲ್ ಎನ್ ಫೀಲ್ಡ್ ಬುಲೆಟ್, ಐದು ಮೊಬೈಲ್ ಫೋನ್ ಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ತನಿಖೆನಡೆಸಿದ ಪೊಲೀಸರಿಗೆ ಈ ಕೃತ್ಯದಲ್ಲಿ ಒಟ್ಟು 13 ಮಂದಿ ಭಾಗಿಯಾಗಿರೋದು ತಿಳಿದು ಬಂದಿದೆ. ಇವರಲ್ಲಿ8 ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ತಿಳಿದು ಬಂದಿದೆ.