ದಂಪತಿ ಕಲಹ: ಮೂರು ಪುಟ್ಟ ಕಂದಮ್ಮಗಳನ್ನು ಕೊಂದು ಬಾವಿಗೆಸೆದ ಪಾಪಿ ತಂದೆ
Sunday, May 1, 2022
ಸುಂದರ್ಗಢ್ (ಒಡಿಶಾ): ದಂಪತಿಯ ಕಲಹದಲ್ಲಿ ಏನೂ ಅರಿಯದ ಮೂರು ಪುಟ್ಟ ಕಂದಮ್ಮಗಳು ಬಲಿಯಾಗಿವೆ. ಈ ಮೂರು ಕಂದಮ್ಮಗಳನ್ನು ಹೆತ್ತ ತಂದೆಯೇ ದಾರುಣವಾಗಿ ಹತ್ಯೆಗೈದು ಬಾವಿಗೆ ಎಸೆದಿದ್ದಾನೆ. ಈ ಹೃದಯವಿದ್ರಾವಕ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ಕುಲಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಪಾಂಡು ಮುಂಡ ಎಂಬ ಪಾಪಿಯೇ ತನ್ನ ಕರುಳಕುಡಿಗಳನ್ನು ಕೊಂದು ಬಾವಿಗೆಸೆದ ತಂದೆ. ಸೀಮಾ(5), ರಾಜು(2) ಹಾಗೂ ಮೂರು ತಿಂಗಳ ಪುಟ್ಟ ಹೆಣ್ಣುಗೂಸು ಬಲಿಯಾದ ನತದೃಷ್ಟ ಮಕ್ಕಳು.
ಪಾಂಡು ಮುಂಡ ಶನಿವಾರ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಪರಿಣಾಮ ಪತ್ನಿ ಧುಬಾಲಿ ಜಗಳ ಮಾಡಿದ್ದಾಳೆ. ಮದ್ಯದ ನಶೆಯಲ್ಲಿದ್ದ ಪಾಂಡು ಕೊಡಲಿಯಿಂದ ಪತ್ನಿ ಮೇಲೆ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಹಂತಕ ಪತಿಯಿಂದ ತಪ್ಪಿಸಿಕೊಂಡು ಆಕೆ ಜೀವ ಉಳಿಸಿಕೊಂಡಿದ್ದಾಳೆ. ಆದರೆ, ಪಾಪಿ ಪಾಂಡು ಕೊಡಲಿಯಿಂದ ಸಣ್ಣ ಮಕ್ಕಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಹತ್ಯೆ ಮಾಡಿದ ಬಳಿಕ ಮೂವರು ಮಕ್ಕಳ ಮೃತದೇಹವನ್ನು ಪಕ್ಕದ ಬಾವಿಗೆಸೆದು ಪಾಂಡು ಮುಂಡ ಪರಾರಿಯಾಗಿದ್ಧಾನೆ. ಈ ಬಗ್ಗೆ ಸುದ್ದಿ ತಿಳಿದ ತಕ್ಷಣ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಿದ್ಧಾರೆ. ಸದ್ಯ ಮೂರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.