ಮಂಗಳೂರು: ದೊಣ್ಣೆಯಿಂದ ಹೊಡೆದು ಪತ್ನಿಯ ಹತ್ಯೆಗೈದು ಆತಹತ್ಯೆಯೆಂದು ಬಿಂಬಿಸಲು ಯತ್ನಿಸಿದ ಪತಿ ಅರೆಸ್ಟ್
Monday, May 16, 2022
ಉಳ್ಳಾಲ: ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದಿರುವ ಹಂತಕ ಪತಿಯೋರ್ವನು ಆ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ್ಟಿದ್ದನು. ಆದರೆ ಮೃತದೇಹದ ಮಹಜರು ವೇಳೆ ಕೊಲೆ ಕೃತ್ಯ ಸಾಬೀತುಗೊಂಡಿರುವ ಹಿನ್ನೆಲೆಯಲ್ಲಿ ಆರೋಪಿ ಪತಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿರುವ ಘಟನೆ ಕುಂಪಲದ ಚೇತನ ನಗರದಲ್ಲಿ ನಡೆದಿದೆ.
ಕುಂಪಲದ ಚೇತನ ನಗರ ನಿವಾಸಿ ಜೋಸೆಫ್ ಫ್ರಾನ್ಸಿಸ್ (54) ಬಂಧಿತ ಪತ್ನಿ ಹಂತಕ. ಕೇರಳದ ಕೊಚ್ಚಿ ಮೂಲದ ನಿವಾಸಿ ಶೈಮಾ(44) ಮೃತಪಟ್ಟ ದುರ್ದೈವಿ ಮಹಿಳೆ.
ಜೋಸೆಫ್ ಫ್ರಾನ್ಸಿಸ್ ತನ್ನ ಪತ್ನಿ ಶೈಮಾ ಹಾಗೂ ಇಬ್ಬರು ಪುತ್ರರೊಂದಿಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ, ಚೇತನ ನಗರ ಎಂಬಲ್ಲಿ ವಾಸವಾಗಿದ್ದನು. ಮೇ 11ರಂದು ಸಂಜೆ ಕ್ಷುಲ್ಲಕ ಕಾರಣಕ್ಕೆ ದಂಪತಿ ಮಧ್ಯೆ ಜಗಳ ನಡೆದಿದೆ. ಈ ಸಂದರ್ಭ ಜೋಸೆಫ್ ಫ್ರಾನ್ಸಿಸ್ ಪತ್ನಿ ಶೈಮಾ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಪರಿಣಾಮ ಆಕೆ ಗಂಭೀರ ಸ್ಥಿತಿಗೆ ತಲುಪಿದ್ದಾರೆ ಆ ಬಳಿಕ ಶೈಮಾರಿಗೆ ಜೋಸೆಫ್ ವಿಷವನ್ನು ಉಣಿಸಿದ್ದಾನೆ ಎನ್ನಲಾಗಿದೆ.
ಆ ತಕ್ಷಣ ಶೈಮಾರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದೇ ದಿನ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಶೈಮಾ ತಂದೆ ಕೊಚ್ಚಿ ನಿವಾಸಿ ಜೋಸೆಫ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ಆರೋಪಿ ಜೋಸೆಫ್ ಆಕೆ ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರಿಗೆ ಸಂಶಯ ಉಂಟಾಗಿ ಮೃತದೇಹದ ಮಹಜರು ನಡೆಸಿದ್ದರು. ಇಂದು ಮಹಜರು ವರದಿ ಬಂದಿದ್ದು, ಇದರಿಂದ ಕೊಲೆ ಕೃತ್ಯ ಬಹಿರಂಗಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೋಸೆಫ್ ಫ್ರಾನ್ಸಿಸ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ತನಿಖೆಗೆ ಉಳ್ಳಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಜೋಸೆಫ್ , ಶೈಮಾ ದಂಪತಿಯ ಇಬ್ಬರು ಪುತ್ರರು ವ್ಯಾಸಂಗ ಮಾಡುತ್ತಿದ್ದರು. ಶೈಮಾ ಹತ್ಯೆ ನಡೆದ ವೇಳೆಯೂ ಅವರು ಮನೆಯಲ್ಲೇ ಇದ್ದರಂತೆ. ಆದರೆ ತಂದೆಯನ್ನು ರಕ್ಷಿಸಲು ಪೊಲೀಸರಲ್ಲಿ ಮಕ್ಕಳು ಸತ್ಯ ಮರೆಮಾಚಿದ್ದರೆಂದು ತಿಳಿದುಬಂದಿದೆ. ತಂದೆ, ತಾಯಿಯ ಜಗಳದಲ್ಲಿ ಪುತ್ರರು ಅನಾಥರಾಗಿದ್ದಾರೆ