ಕನ್ಯೆ ಫೋಟೋ ಕಳುಹಿಸಿ ಮದುವೆ ಮಾತುಕತೆ ನಡೆಸಲು ಮನೆಗೆ ಕರೆಸಿಕೊಂಡು ಬಿಜೆಪಿ ಮುಖಂಡನ ಹತ್ಯೆ: ಕೊಲೆ ಕೃತ್ಯ ಬಯಲಾದದ್ದು ಹೇಗೆ ಗೊತ್ತೇ?
Tuesday, May 3, 2022
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಬಿಜೆಪಿ ಮುಖಂಡನೋರ್ವನ ದಿಢೀರ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಇದೀಗ ನಾಪತ್ತೆಯಾದ 2-3 ದಿನಗಳ ಬಳಿಕ ಅವರು ಮೃತದೇಹವಾಗಿ ಪತ್ತೆಯಾಗಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಕೊಲೆ ಆರೋಪಿಯ ಸುಳಿವು ದೊರಕಿದ್ದು ಹೇಗೆ ಗೊತ್ತೇ?. ಇಲ್ಲಿದೆ ಅದರ ಡಿಟೈಲ್ ಸ್ಟೋರಿ.
ಸೊರಬ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ, ಬಿಜೆಪಿ ಮುಖಂಡ ಲೇಖಪ್ಪ(36) ಕೊಲೆಯಾದವರು. ಲೇಖಪ್ಪ ತಮ್ಮ ಗ್ರಾಮದಲ್ಲಿ ಉತ್ತಮ ವರ್ಚಸ್ವಿ ನಾಯಕರಾಗಿ ಹೆಸರು ಗಳಿಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ರಾಜಕೀಯವಾಗಿ ಬೆಳೆಯುತ್ತಿದ್ದು, ಇದೀಗ ಮದುವೆಯಾಗಲು ಕನ್ಯೆಯನ್ನು ಹುಡುಕುತ್ತಿದ್ದರು.
ಆದರೆ ಇದನ್ನು ಸಹಿಸದ ಅದೇ ಗ್ರಾಮದ ಕೃಷ್ಣಪ್ಪ ಎಂಬಾತ ಲೇಖಪ್ಪನಿಗೆ ಯುವತಿಯ ಫೋಟೋವೊಂದನ್ನು ಕಳುಹಿಸಿ ಮದುವೆ ವಿಚಾರ ಮಾತನಾಡಲು ಮನೆಗೆ ಕರೆಸಿಕೊಂಡಿದ್ದಾನೆ. ಮನೆಗೆ ಬಂದ ಲೇಖಪ್ಪನನ್ನು ಟವಲ್ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಯಾರಿಗೂ ತಿಳಿಯದಂತೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಲೇಖಪ್ಪನ ಮೃತದೇಹವನ್ನು ಸಮೀಪದ ಕಡಸೂರು ಹೊಳೆಗೆ ಎಸೆದು ಬಂದಿದ್ದಾನೆ.
ಎಪ್ರಿಲ್ 11ರಂದು ಮನೆಯಿಂದ ಜಮೀನು ಕೆಲಸಕ್ಕೆಂದು ಲೇಖಪ್ಪ ಹೋಗಿದ್ದರು. ಆದರೆ 2-3 ದಿನವಾದರೂ ಆತ ಮನೆಗೆ ಬರಲೇ ಇಲ್ಲ. ಆದ್ದರಿಂದ ಎ.14 ರಂದು ಲೇಖಪ್ಪನವರ ಸಹೋದರ ಹುಚ್ಚಪ್ಪ, ಸೊರಬ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲೇಖಪ್ಪನಿಗಾಗಿ ಶೋಧ ಕಾರ್ಯಾರಂಭಿಸಿದ್ದಾರೆ. ಈ ವೇಳೆ ಲೇಖಪ್ಪನ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಪೊಲೀಸರು ಇದೊಂದು ಸಹಜ ಸಾವು ಪ್ರಕರಣವೆಂದೇ ಭಾವಿಸಿ, ತನಿಖೆ ಮುಂದುವರೆಸಿದ್ದರು.
ಆದರೆ ಲೇಖಪ್ಪ ಯುವತಿಯೊಬ್ಬಳನ್ನು ವಿವಾಹವಾಗಿರುವಂತೆ ಎಡಿಟೆಡ್ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದು, ಪೊಲೀಸರ ಗಮನಕ್ಕೆ ಬಂದಿತ್ತು.
ಪ್ರಕರಣದ ದಾರಿ ತಪ್ಪಿಸಲು ಹಾಗೂ ಗ್ರಾಮಸ್ಥರು, ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಫೋಟೋ ಕೃಷ್ಣಪ್ಪ ಹರಿಬಿಟ್ಟಿದ್ದ ಎನ್ನಲಾಗುತ್ತಿದೆ. ಈ ಫೋಟೋದ ಜಾಡು ಹಿಡಿದು ಹೊರಟ ಪೊಲೀಸರಿಗೆ ಹೊಸ ಸಂಗತಿ ತಿಳಿದು ಬಂದಿತ್ತು. ಮೇ.2 ರಂದು ಆರೋಪಿ ಕೃಷ್ಣಪ್ಪನ ಮೇಲೆ ಅನುಮಾನ ಇರುವುದಾಗು ಪುನಃ ಮತ್ತೊಂದು ದೂರು ಸಹ ದಾಖಲಾಗಿತ್ತು. ಈ ದೂರಿನನ್ವಯ ಪೊಲೀಸರು ಕೃಷ್ಣಪ್ಪನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಲೇಖಪ್ಪನ ಹತ್ಯೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.
ಮನ್ಮನೆ ಗ್ರಾಮದಲ್ಲಿ ಬಿಜೆಪಿ ಮುಖಂಡನಾಗಿದ್ದ ಲೇಖಪ್ಪನಿಗೆ ಮತ್ತು ಅದೇ ಗ್ರಾಮದ ಗ್ರಾಪಂ ಸದಸ್ಯೆಯ ಪತಿ ಕೃಷ್ಣಪ್ಪನ ನಡುವೆ ರಾಜಕೀಯವಾಗಿ ಪೈಪೋಟಿ ಇತ್ತು. ಇತ್ತೀಚೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯೊಂದನ್ನು ಲೇಖಪ್ಪ ಕೈಗೊಂಡಿದ್ದ. ಈ ಸಂದರ್ಭ ಲೇಖಪ್ಪ ಹಾಗೂ ಕೃಷ್ಣಪ್ಪನ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯತಿ ನಡೆಸಲಾಗಿತ್ತು. ಆದರೆ ರಾಜಕೀಯವಾಗಿ ಲೇಖಪ್ಪ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಆತನ ಹತ್ಯೆಗೆ ಕೃಷ್ಣಪ್ಪ ಸಂಚು ರೂಪಿಸಿದ್ದಾನೆ. ಬಳಿಕ ಲೇಖಪ್ಪನನ್ನು ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಸುಮ್ಮನಾಗಿದ್ದ. ಇದೀಗ ಪೊಲೀಸ್ ಬಲೆಗೆ ಬಿದ್ದಿರುವ ಕೃಷ್ಣಪ್ಪ ಕಂಬಿ ಎಣಿಸುತ್ತಿದ್ದಾನೆ.