ಭದ್ರತೆ ಹಿಂಪಡೆದ ಒಂದೇ ದಿನಕ್ಕೆ ಗುಂಡಿಕ್ಕಿ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕನ ಹತ್ಯೆ
Sunday, May 29, 2022
ಚಂಡೀಗಢ(ಪಂಜಾಬ್): ರಾಜಕೀಯ, ಧಾರ್ಮಿಕ ಮುಖಂಡರು, ನಿವೃತ್ತ ಪೊಲೀಸ್ ಅಧಿಕಾರಿಗಳು ಸೇರಿದಂತೆ 424 ವಿವಿಧ ಗಣ್ಯರಿಗೆ ನೀಡಲಾಗಿರುವ ಭದ್ರತೆಯನ್ನು ವಾಪಸ್ ಪಡೆದ ಒಂದು ದಿನಕ್ಕೆ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ದುರ್ಘಟನೆ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ನಡೆದಿದೆ.
ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಈ ಬಾರಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನಸಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅವರು ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರಿ ಅಂತರದಿಂದ ಪರಾಭವಗೊಂಡಿದ್ದರು. ಆದರೆ ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವರಾಗಿದ್ದ ವಿಜಯ್ ಸಿಂಗ್ಲಾರನ್ನು ಇತ್ತೀಚೆಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಜಾಗೊಳಿಸಿದ್ದರು.
ಕಳೆದ ತಿಂಗಳು ಗಾಯಕ ಸಿಧು ಮೂಸ್ ವಾಲಾ ತಮ್ಮ 'ಸ್ಕೇಪ್ಗೋಟ್'(ಬಲಿಪಶು) ಹಾಡಿನಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಅದರ ಬೆಂಬಲಿಗರನ್ನು ಗುರಿಯಾಗಿರಿಸಿಕೊಂಡು ಹಾಡನ್ನು ಹಾಡಿದ್ದಾರೆ. ಈ ಹಾಡು ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು. ಅಲ್ಲದೆ, ಈ ಹಾಡಿನಲ್ಲಿ ಗಾಯಕ ಸಿಧುವಮೂಸ್ ವಾಲಾ ಎಎಪಿ ಕಾರ್ಯಕರ್ತರನ್ನು ದೇಶದ್ರೋಹಿ ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪಿತೂರಿ ನಡೆಸಲಾಗಿತ್ತು.
ಆದ್ದರಿಂದ ತಮಗೆ ಜೀವಭಯ ಇರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಕೋರಿದ್ದ ಅವರಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಭದ್ರತೆ ನೀಡಿತ್ತು. ಇದೀಗ ಭಗವಂತ್ ಮಾನ್ ಸರ್ಕಾರ ಭದ್ರತೆ ಹಿಂಪಡೆದಿರುವ ಒಂದೇ ದಿನದಲ್ಲಿ ಸಿಧು ಮೂಸ್ ವಾಲ್ ರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.