ನಾದಿನಿಯೊಂದಿಗೆ ಅಕ್ರಮ ಸಂಬಂಧ: ಪತ್ನಿಯನ್ನೇ ಕೊಲೆಗೈದ ಕೊಲೆಗಡುಕ ಪತಿ
Saturday, May 7, 2022
ನೆಲಮಂಗಲ: ಈತನಿಗೆ ಮದುವೆಯಾಗಿ ಸುಂದರವಾದ ಪತ್ನಿ, ಇಬ್ಬರು ಮಕ್ಕಳಿದ್ದರೂ ನಾದಿನಿಯ ಮೇಲಿತ್ತು ಮೋಹ. ಇದಕ್ಕೆ ಪತ್ನಿಯೇ ಅಡ್ಡವಾಗಿದ್ದಳು. ಆದ್ದರಿಂದ ಆಕೆಯನ್ನೇ ಕೊಂದ ಸುಳ್ಳು ಕಥೆ ಸೃಷ್ಟಿಸಿದ್ದ ಪತಿ ಕೊನೆಗೂ ಪೊಲೀಸ್ ಖೆಡ್ಡಾಕ್ಕೆ ಬಿದ್ದಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮದ ನಿವಾಸಿ ಶ್ವೇತಾ (30) ಮೃತ ದುರ್ದೈವಿ. ಹಿರಿಯೂರು ತಾಲೂಕಿನ ಕುರುಬರಹಳ್ಳಿ ಚೌಡೇಶ್ (35) ಕೊಲೆಗಡಕ ಪತಿ. 9 ವರ್ಷಗಳ ಹಿಂದೆ ಶ್ವೇತಾಗೆ ಚೌಡೇಶ್ ನೊಂದಿಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಉದ್ಯೋಗವನ್ನು ಅರಸಿ ನೆಲಮಂಗಲಕ್ಕೆ ಬಂದಿದ್ದ ಚೌಡೇಶ್ ದಂಪತಿ ತೊಣಚಿನಕುಪ್ಪೆ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ತೊಣಚಿನಕುಪ್ಪೆ ಬಳಿಯ ಬಾರ್ನಲ್ಲಿ ಕ್ಯಾಶಿಯರ್ ಆಗಿದ್ದ ಚೌಡೇಶ್, 3 ವರ್ಷಗಳ ಹಿಂದೆ ನಿವೇಶನ ಖರೀದಿಸಿ, ಮನೆ ಕಟ್ಟಿಕೊಂಡು ವಾಸವಿದ್ದ.
ಆದರೆ ಇದ್ದಕ್ಕಿದ್ದಂತೆ ಮಂಗಳವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದ್ದ ಶ್ವೇತಾಳನ್ನು ಸರಕಾರಿ ಆಸ್ಪತ್ರೆಗೆ ಚೌಡೇಶ್ ದಾಖಲಿಸಿದ್ದಾನೆ. ಲೋ ಬಿಪಿಯಾಗಿ ಕುಸಿದು ಬಿದ್ದಿದ್ದಾಳೆಂದು ಚೌಡೇಶ್ ವೈದ್ಯರ ಬಳಿ ತಿಳಿಸಿದ್ದ. ತಪಾಸಣೆ ನಡೆಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಸುದ್ದಿ ತಿಳಿದು ಶ್ವೇತಾ ಪೋಷಕರು ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನೆಲಮಂಗಲಕ್ಕೆ ಬಂದಿದ್ದಾರೆ. ಆಕೆಯ ಮೃತದೇಹವನ್ನು ಪರಿಶೀಲಿಸಿದಾಗ ಥಳಿಸಿದ್ದಲ್ಲದೆ, ಕುತ್ತಿಗೆ ಬಿಗಿದಿರುವ ಗುರುತುಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶ್ವೇತಾ ಪಾಲಕರು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಕ್ಷಣ ಚೌಡೇಶ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮೊದಲಿಗೆ ಬಾಯಿ ಬಿಡದಿದ್ದರೂ, ಆ ಬಳಿಕ ತಾನು ಶ್ವೇತಾ ಸಹೋದರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೆ. ಈ ವಿಚಾರ ಶ್ವೇತಾಗೆ ತಿಳಿದು ಗಲಾಟೆ ಮಾಡುತ್ತಿದ್ದಳು. ಇದೇ ವಿಚಾರವಾಗಿ ಮಂಗಳವಾರ ರಾತ್ರಿ ಕೂಡ ಜಗಳವಾಗಿದೆ. ಆಗ ಕೋಪದಲ್ಲಿ ಶ್ವೇತಾಳಿಗೆ ಹಲ್ಲೆಗೈದು ಕುತ್ತಿಗೆ ಬಿಗಿದು ಕೊಂದುಬಿಟ್ಟೆ ಎಂದು ಬಾಯ್ಬಿಟ್ಟಿದ್ದಾನೆ.
ಚೌಡೇಶ್ ನಾಲ್ಕೈದು ವರ್ಷಗಳಿಂದ ಶ್ವೇತಾಳೊಂದಿಗೆ ಜಗಳವಾಡುತ್ತಿದ್ದ. ಜಗಳವಾದಾಗಲೆಲ್ಲ ಆಕೆಯ ಪೋಷಕರು ಬಂದು ಸಂಧಾನ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಮನೆ ನಿರ್ಮಿಸುವ ಸಲುವಾಗಿ ಶ್ವೇತಾ ಪಾಲಕರು ಚೌಡೇಶ್ಗೆ 5 ಲಕ್ಷ ರೂ. ಕೊಟ್ಟಿದ್ದರು. ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ಶ್ವೇತಾಗೆ ಕಿರುಕುಳ ನೀಡುತ್ತಿದ್ದ ಎಂದು ಪುತ್ರಿ ತಮ್ಮ ಬಳಿ ದೂರಿಕೊಂಡಿದ್ದಳು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಚೌಡೇಶ್ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಶ್ವೇತಾಳ ತಾಯಿ ಭಾಗ್ಯಮ್ಮ ಆರೋಪಿಸಿದ್ದಾರೆ.