ಅಡುಗೆ ಮಾಡುವ, ಮನೆಗೆಲಸದ ವಿಚಾರದಲ್ಲಿ ದಂಪತಿ ಕಲಹ: ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯ ಹೊಡೆದುರುಳಿಸಿ ಕೊಂದ ಪತಿ
Monday, May 16, 2022
ಗುರುಮಠಕಲ್(ಯಾದಗಿರಿ): ಕ್ಷುಲ್ಲಕ ಕಾರಣವಾದ ಅಡುಗೆ ಮಾಡುವ, ಮನೆಗೆಲಸ ಮಾಡುವ ವಿಚಾರದಲ್ಲಿ ನಡೆಯುತ್ತಿದ್ದ ದಂಪತಿ ಕಲಹ ಭಾರೀ ಗಂಡಾಂತರಕ್ಕೆ ಎಡೆ ಮಾಡಿದೆ. ದಂಪತಿಯ ಮದುವೆ ವಾರ್ಷಿಕೋತ್ಸವದ ದಿನದಂದೇ ಪತ್ನಿಯ ಹೆಣ ಉರುಳಿದೆ. ಪತ್ನಿಯ ಕೊಲೆಗೈದಿರುವ ಪತಿಯೀಗ ಜೈಲು ಪಾಲಾಗಿರುವ ಘಟನೆ ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ನಡೆದಿದೆ.
ಅಡುಗೆ ಹಾಗೂ ಮನೆ ಕೆಲಸದ ವಿಚಾರಕ್ಕೆ ದಂಪತಿ ನಡುವೆ
ನಿರಂತರ ಕಲಹಗಳು ಏರ್ಪಡುತ್ತಿತ್ತು. ಇದೀಗ ಮನೆಯಲ್ಲೇ ಪತ್ನಿಯನ್ನು ನೇಣುಬಿಗಿದು ಕೊಲೆಗೈದ ಹಂತಕ ಪತಿ ಪರಾರಿಯಾಗಿದ್ದಾನೆ.
ಭೀಮರಾಯ ಎಂಬಾತನೇ ಕೊಲೆಗೈದಿರುವ ಆರೋಪಿ. ಆತನ ಪತ್ನಿ ಪಾರ್ವತಿ ಕೊಲೆಯಾದ ದುರ್ದೈವಿ ಮಹಿಳೆ. ಸೌರಾಷ್ಟ್ರಹಳ್ಳಿಯ ಪಾರ್ವತಿ ಹಾಗೂ ಗೋಪಾಳಪುರ ಗ್ರಾಮ ನಿವಾಸಿ ಭೀಮರಾಯನ ವಿವಾಗಯ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿತ್ತು. ಭೀಮರಾಯ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ದಂಪತಿ ಆರಂಭದ ಕೆಲ ತಿಂಗಳುಗಳ ಕಾಲ ಅನ್ಯೋನ್ಯವಾಗಿದ್ದರು. ಆದರೆ ದಿನ ಕಳೆದಂತೆ ಅಡುಗೆ ಮಾಡುವ ವಿಚಾರ ಹಾಗೂ ಮನೆಗೆಲಸದ ವಿಚಾರವಾಗಿ ದಂಪತಿ ನಡುವೆ ಜಗಳವೇರ್ಪಟ್ಟಿತ್ತು.
ಈ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು. ಯಲ್ಹೇರಿ ಗ್ರಾಮದ ಜಾತ್ರೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ದಂಪತಿ ಗೋಪಾಳಪುರ ಗ್ರಾಮಕ್ಕೆ ಬಂದಿದ್ದರು. ಮೇ 13ರಂದು ಇವರ ಮದುವೆ ವಾರ್ಷಿಕೋತ್ಸವದ ದಿನದಂದೂ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಪರಿಣಾಮ ಕುಪಿತಗೊಂಡ ಪತಿ ತಡರಾತ್ರಿ ಪತ್ನಿ ಪಾರ್ವತಿಯನ್ನು ಮನೆಯಲ್ಲಿ ನೇಣು ಬಿಗಿದು ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದೀಗ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.