ಮಂಗಳೂರು: ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿರುವ ತ್ಯಾಜ್ಯ ತನಿಖೆಗೆ ಎನ್ ಜಿಟಿಯಿಂದ ಸಮಿತಿ ನಿಯೋಜನೆ
Friday, May 27, 2022
ಮಂಗಳೂರು: ನಗರದ ಸುರತ್ಕಲ್ ಬಳಿಯ ದೊಡ್ಡಕೊಪ್ಪಲಿನ ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಜಿಡ್ಡುವಿನಂತಹ ತ್ಯಾಜ್ಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ಪ್ರಧಾನ ಪೀಠವು ಮಾಲಿನ್ಯದ ಮೂಲವನ್ನು ಪತ್ತೆ ಹಚ್ಚಲು ಸಮಿತಿಯೊಂದನ್ನು ನಿಯೋಜನೆ ಮಾಡಿದೆ.
ಸಮುದ್ರ ತೀರದಲ್ಲಿ ತ್ಯಾಜ್ಯ ಜಿಡ್ಡು ತೇಲುತ್ತಿರುವುದಲ್ಲದೆ, ಟಾರಿನ ಉಂಡೆಗಳು ಲಭ್ಯವಾಗಿತ್ತು. ಅಲ್ಲದೆ ಕೂಳೂರು ಬಳಿಯ ಫಲ್ಗುಣಿ ನದಿಯ ತೀರದಲ್ಲಿ ಪಂಜರ ಮೀನು ಕೃಷಿಯ ಮೀನುಗಳು ಏಕಾಏಕಿ ಸತ್ತು ಹೋಗಿತ್ತು. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಎನ್ ಜಿಟಿಯು ಇದರ ಅಧ್ಯಯನಕ್ಕೆ ಸಮಿತಿಯೊಂದನ್ನು ನಿಯೋಜನೆ ಮಾಡಿದೆ. ಈ ಸಮಿತಿಯು 2 ವಾರಗಳೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆಯನ್ನು ನಡೆಸಬೇಕು. ಜೊತೆಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿ, ಅಧ್ಯಯನ ನಡೆಸಿ ಎನ್ ಜಿಟಿಗೆ 2ತಿಂಗಳೊಳಗೆ ವರದಿ ಸಲ್ಲಿಸಬೇಕು.
ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ.ಜಿಲ್ಲಾಧಿಕಾರಿ, ಕೋಸ್ಟ್ ಗಾರ್ಡ್ ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದವರು ಸಮಿತಿಯಲ್ಲಿದ್ದಾರೆ. ಎನ್ ಜಿಟಿ ಅಧ್ಯಕ್ಷ ಆದರ್ಶ ಕುಮಾರ್ ಗೋಯಲ್, ಸದಸ್ಯರಾದ ಸುಧೀರ್ ಅಗರ್ ವಾಲ್ ಹಾಗೂ ತಜ್ಞರಾದ ಎ.ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠ ಈ ಆದೇಶವನ್ನು ಹೊರಡಿಸಿದೆ.